ಮನೆಗಳಿಗೆ ನೀರು ನುಗ್ಗುವುದನ್ನು ತಪ್ಪಿಸಿ

lokayukta (1)
ಸೊರಬದಲ್ಲಿ ಶಿವಮೊಗ್ಗ ಲೋಕಾಯುಕ್ತ ಇನ್ಸ್‌ಪೆಕ್ಟರ್ ಎಚ್.ಎಸ್.ಸುರೇಶ್ ಅವರು ಸಾರ್ವಜನಿಕರ ಅಹವಾಲು ಆಲಿಸಿದರು. ತಹಸೀಲ್ದಾರ್ ಮಂಜುಳಾ ಡಿ. ಹೆಗಡಾಳ್, ಇಒ ಡಾ. ಪ್ರದೀಪ್‌ಕುಮಾರ್ ಇದ್ದರು.
Published on

ಸೊರಬ: ಮಳೆಗಾಲದಲ್ಲಿ ಸೊರಬ-ಆನವಟ್ಟಿ ರಸ್ತೆಯ ದಾನಮ್ಮ ಬಡಾವಣೆಯಲ್ಲಿ ಚರಂಡಿಗಳು ಉಕ್ಕಿಹರಿದು ಮನೆಯೊಳಗೆ ನೀರು ನುಗ್ಗುತ್ತದೆ ಎಂದು ಎಂದು ಸ್ಥಳೀಯ ನಿವಾಸಿಗಳು ಲೋಕಾಯುಕ್ತ ಪೊಲೀಸರ ಬಳಿ ಅಹವಾಲು ಸಲ್ಲಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಶಿವಮೊಗ್ಗ ಲೋಕಾಯುಕ್ತ ಇನ್ಸ್‌ಪೆಕ್ಟರ್ ಎಚ್.ಎಸ್.ಸುರೇಶ್ ಅವರಿಗೆ ದೂರು ಸಲ್ಲಿಸಿದ ನಿವಾಸಿಗಳು, ಸಮಸ್ಯೆ ನಿವಾರಣೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು.

ತಾಲೂಕಿನ ಕೊರಕೋಡು ಪ್ರಾಥಮಿಕ ಶಾಲೆಯ ಜಾಗ ಒತ್ತುವರಿಯಾಗಿದೆ. ಇದನ್ನು ತೆರವುಗೊಳಿಸುವಂತೆ ಸ್ಥಳಿಯ ನಿವಾಸಿಯೊಬ್ಬರು ಮನವಿ ಸಲ್ಲಿಸಿದರು. ಜನನ ಮತ್ತು ಮರಣ ದಾಖಲೆಗಳನ್ನು ಪಡೆಯಲು ಶುಲ್ಕ ಹೆಚ್ಚು ಮಾಡಲಾಗಿದೆ. ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಜನಸಾಮಾನ್ಯರು ದಾಖಲೆಗಳನ್ನು ಪಡೆಯಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ ಎಂದು ಕೊಡಕಣಿ ಸದಾಶಿವ ಎಂಬುವರು ದೂರು ಸಲ್ಲಿಸಿದರು.

ಸರ್ಕಾರವು ಬಡ ಜನರಿಗೆ ಅನುಕೂಲವಾಗಲು ಗೃಹಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿತ್ತು. ಇದೀಗ 8000 ರೂ. ಬಿಲ್ ಬಾಕಿ ಇದೆ ಎಂದು ಮೆಸ್ಕಾಂ ನೌಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಕೂಡಲೇ ಪುನಃ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಪಟ್ಟಣದ ನಿವಾಸಿ ಮನವಿ ಸಲ್ಲಿಸಿದರು.

ಸಭೆಯಲ್ಲಿ ಹೊಸದಾಗಿ 4 ಅರ್ಜಿಗಳು ಸಲ್ಲಿಕೆಯಾದವು. ಉಳಿದಂತೆ ಈ ಹಿಂದೆ ಲೋಕಾಯುಕ್ತರಿಗೆ ನೀಡಿದ ಅರ್ಜಿಗಳಿಗೆ ಸಂಬಂಧಿಸಿದ ಅಧಿಕಾರಿಗಳಿಂದ ಪರಿಹಾರ ದೊರೆತ ಬಗ್ಗೆ ಮತ್ತು ವಿಳಂಬ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದಾಗ ಎದುರಾಗುವ ಕಾನೂನು ತೊಡಕಗಳ ವಿವರವನ್ನು ಕೆಲ ಅರ್ಜಿದಾರರಿಗಿ ತಿಳಿಹೇಳಲಾಯಿತು.

ತಹಸೀಲ್ದಾರ್ ಮಂಜುಳಾ ಡಿ. ಹೆಗಡಾಳ್, ಇಒ ಡಾ. ಪ್ರದೀಪ್‌ಕುಮಾರ್, ಆನವಟ್ಟಿ ಪಪಂ ಮುಖ್ಯಾಧಿಕಾರಿ ಸಂತೋಷ್‌ಕುಮಾರ್, ಕೃಷಿ ಸಹಾಯಕ ನಿದೇರ್ಶಕ ಕೆ.ಜಿ.ಕುಮಾರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಬಿಸಿಎಂ ಅಧಿಕಾರಿ ರೇವಣಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ್, ಎಪಿಎಂಸಿ ವ್ಯವಸ್ಥಾಪಕ ನಿರ್ದೇಶಕಿ ಆಶಾ, ಗ್ರೇಡ್-2 ತಹಸೀಲ್ದಾರ್ ನಿರ್ಮಲಾ, ಅಶ್ವಿನಿ ಭಂಡಾರಿ, ನಟೇಶ್, ಯೋಗರಾಜ್, ಲಕ್ಷ್ಮೀನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net