ಭಾರತದಲ್ಲೂ ಸೊಮಾಲಿಯಾ ಮಾದರಿಯ ಭಯೋತ್ಪಾದಕ ದಾಳಿ?; ಮುಂಬೈ ಪೊಲೀಸರಿಗೆ ಬಂತು ಬೆದರಿಕೆ ಕರೆ

Mumbai Police
Published on

ನವದೆಹಲಿ: ಕಳೆದ ಒಂದು ವಾರದಲ್ಲಿ ಮುಂಬೈ ಪೊಲೀಸರಿಗೆ ಮೇಲಿಂದ ಮೇಲೆ ಬೆದರಿಕೆ ಕರೆ ಬರುತ್ತಿದ್ದು, ಇದೀಗ ಭಾರತದಲ್ಲೂ ಸೊಮಾಲಿಯಾ ಮಾದರಿಯ ದಾಳಿ ನಡೆಸುವುದಾಗಿ ಅನಾಮಿಕ ಕರೆಯ ಮೂಲಕ ಸವಾಲೊಡ್ಡಿದ್ದಾರೆ.

ವಾರದಲ್ಲಿ ನಾಲ್ಕು ಸಲ ಈ ಥರದ ಕರೆ ಬಂದಿದ್ದು, ಇಂದು ಬಂದಿರುವ ಕರೆಯಲ್ಲಿ ಸೊಮಾಲಿಯಾ ಮಾದರಿಯ ದಾಳಿ ನಡೆಸುವುದಾಗಿ ಯಾರೋ ಸವಾಲೆಸೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಇನ್ನಷ್ಟು ಎಚ್ಚರಿಕೆ ವಹಿಸಿ, ನಿಗಾ ಇರಿಸುವಂತಾಗಿದೆ.

ದಕ್ಷಿಣ ಆಫ್ರಿಕದ ಸೊಮಾಲಿಯಾದ ರಾಜಧಾನಿ ಮೊಗಡಿಶುವಲ್ಲಿನ ಹಯಾತ್ ಹೋಟೆಲ್​ನಲ್ಲಿ ಆ. 19ರ ರಾತ್ರಿ ಗುಂಡಿನ ದಾಳಿ ನಡೆದಿದ್ದು, 20 ಮಂದಿ ಸಾವಿಗೀಡಾಗಿ ಸುಮಾರು 40 ಮಂದಿ ಗಾಯಗೊಂಡಿದ್ದರು. ಶಸ್ತ್ರಧಾರಿಗಳು ಹೋಟೆಲ್​ಗೆ ಪ್ರವೇಶಿಸುವ ಮೊದಲು ಹೋಟೆಲ್​ ಮುಂಭಾಗದಲ್ಲಿ ಸ್ಫೋಟ ಕೂಡ ನಡೆಸಿದ್ದರು. ತೀವ್ರಗಾಮಿ ಸಂಘಟನೆ ಅಲ್​-ಶಬಾಬ್​ ಈ ದಾಳಿಗೆ ಕಾರಣವೆಂದು ಘೋಷಿಸಿಕೊಂಡಿತ್ತು. ಈ ಸಂಘಟನೆ ಅಲ್​-ಖೈದ ಜತೆ ಸಂಪರ್ಕವನ್ನು ಹೊಂದಿದೆ. ಮುಂಬೈ ಪೊಲೀಸರಿಗೆ ಕರೆ ಮಾಡಿದವರು ಕೂಡ ಇದೇ ಮಾದರಿ ದಾಳಿ ಭಾರತದಲ್ಲಿ ನಡೆಸಲಿರುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net