ಕನ್ನಡದ ‘ಕೇರ್ ಆಫ್ ಫುಟ್‌ಪಾತ್ 2, ಪುನೀತ್ ರಾಜಕುಮಾರ್ ಅಭಿನಯದ ‘ನಟಸಾರ್ವಭೌಮ’ ಸೇರಿ ಹಿಂದಿ, ತೆಲುಗು ಸೇರಿ 25ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವಿಕಾ ಗೋರ್‌ಗೆ ಸಲ್ಲುತ್ತದೆ. ಬಾಲಿವುಡ್ ಪ್ರವೇಶಿಸುವ ಮುನ್ನ ನಟಿ ಹಿಂದಿ ಕಿರುತೆರೆಯಲ್ಲಿ ದೊಡ್ಡ ಹೆಸರು ಗಳಿಸಿದ್ದರು. ಹಿಂದಿಯ ‘ರಾಜಕುಮಾರ್ ಆರ್ಯನ್’, ‘ಬಾಲಿಕಾ ವಧು’ ಸೇರಿ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದ ಅವರಿಗೆ ‘ಬಾಲಿಕಾ ವಧು’ ಧಾರಾವಾಹಿಯ ಆನಂದಿ ಸಿಂಗ್ ಪಾತ್ರವು ದೊಡ್ಡಮಟ್ಟದ ಹೆಸರು ತಂದುಕೊಟ್ಟಿತ್ತು. ಆ ಬಳಿಕ ಅವರು ಹಿಂದಿ ಸೇರಿ ಪರಭಾಷೆಯ ಚಿತ್ರರಂಗದಲ್ಲಿ ಸಕ್ರಿಯರಾದರು. ಇದೀಗ ತುಂಬಾ ವರ್ಷಗಳ ಬಳಿಕ ಅವಿಕಾ ಮತ್ತೆ ಕಿರುತೆರೆಗೆ ಮರಳುವ ಮುನ್ಸೂಚನೆ ನೀಡಿದ್ದಾರೆ. ಇತ್ತೀಚೆಗೆ ಅವರು ನಿಗೂಢ ಪೋಸ್ಟ್ ಹಂಚಿಕೊಂಡಿದ್ದು, ಅದರ ಆಧಾರದ ಮೇಲೆ ನಟಿ ಮತ್ತೆ ಧಾರಾವಾಹಿ ಲೋಕಕ್ಕೆ ಮರಳುತ್ತಿದ್ದಾರೆ ಅಭಿಮಾನಿಗಳು ಗುರುತಿಸಿದ್ದಾರೆ. ‘ಜೀವನ ವೃತ್ತಾಕಾರವಾಗಿದೆ. ಕೆಲವೊಮ್ಮೆ ನಾವು ಹೊಸದಾಗಿ ರೂಪಿಸಿಕೊಳ್ಳುವುದನ್ನು, ಹೊಸ ಹಾದಿಯ ಸಾಧನೆಗಳನ್ನು ಸಂಭ್ರಮಿಸುತ್ತೇವೆ. ಆದರೆ, ಕೆಲವು ತಿರುವುಗಳಿಂದಾಗಿ ಜೀವನ ಆರಂಭವಾದ ಜಾಗಕ್ಕೆ ಮತ್ತೆ ತಂದು ನಿಲ್ಲಿಸುತ್ತದೆ. ಹಾಗಂಥ, ನೀವು ಹಿಂದೆ ಸರಿದಿದ್ದೀರಿ ಎಂದಲ್ಲ, ಬದಲಿಗೆ ಆ ಜಾಗವನ್ನು ಸಂಪೂರ್ಣವಾಗಿ ಅರಿತುಕೊಂಡಿದ್ದೀರಿ ಎಂದರ್ಥ. ಆ ಮೂಲಸ್ಥಾನಕ್ಕೆ ಮರಳುವುದರಲ್ಲಿ ಒಂದು ರೀತಿಯ ನೆಮ್ಮದಿಯ ಭಾವವಿದೆ. ಅಲ್ಲಿ ನಮ್ಮ ಕೆಲಸ, ತುಡಿತ ಹಾಗೂ ಕನಸುಗಳನ್ನು ಪುನಃ ರೂಪಿಸುತ್ತದೆ’ ಎಂದು ಹಂಚಿಕೊಂಡಿದ್ದಾರೆ. ತೆಲುಗಿನ ‘ಅಗ್ಲೀ ಸ್ಟೋರಿ’ ಬಳಿಕ ನಟಿ ಮತ್ತೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿಲ್ಲ. -ಏಜೆನ್ಸೀಸ್