ಚಮೋಲಿಯಲ್ಲಿ ಹಿಮಾಘಾತ; ಹಿಮಪಾತದಲ್ಲಿ 50ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ | Avalanche Hits Chamoli

Untitled design (37) (2)
Published on

ಡೆಹ್ರಾಡೂನ್​​; ಭಾರತ-ಟಿಬೆಟ್-ಚೀನಾ ಗಡಿ ಪ್ರದೇಶವಾದ ಉತ್ತರಾಖಂಡದ ಮಾನಾದಲ್ಲಿ ಹಿಮನದಿ ಒಡೆದ ಕಾರಣ ಭಾರಿ ಹಿಮಪಾತ ಸಂಭವಿಸಿದೆ. ಇದರಿಂದಾಗಿ ಬಿಆರ್‌ಒ ಶಿಬಿರಕ್ಕೆ ಹಾನಿಯಾಗಿದೆ. ಅಲ್ಲದೆ ಗಡಿ ಚೆಕ್‌ಪೋಸ್ಟ್‌ಗಳಿಗೆ ಕೆಲಸ ಮಾಡುತ್ತಿದ್ದ ಸುಮಾರು 57 ಕಾರ್ಮಿಕರು ಹಿಮದ ಅಡಿಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.(Avalanche Hits Chamoli)

ಇಲ್ಲಿಯವರೆಗೆ ಹಿಮದ ಅಡಿಯಲ್ಲಿ ಸಿಲುಕಿದ್ದ 16 ಕಾರ್ಮಿಕರನ್ನು ರಕ್ಷಿಸಲಾಗಿದೆ. ಇವರೆಲ್ಲರೂ ಮಾನಾದಿಂದ ಮಾನಾ ಪಾಸ್‌ವರೆಗಿನ 50 ಕಿ.ಮೀ ಪ್ರದೇಶದಲ್ಲಿ ಹೆದ್ದಾರಿ ಅಗಲೀಕರಣ ಮತ್ತು ಡಾಂಬರೀಕರಣ ಕೆಲಸದಲ್ಲಿ ತೊಡಗಿರುವ ಕಂಪನಿಯ ಕಾರ್ಮಿಕರು. ಈ ರಸ್ತೆಯ ಕೆಲಸವನ್ನು ಬಿಆರ್‌ಒ ಇಪಿಸಿ ಕಂಪನಿಯ ಮೂಲಕ ಮಾಡುತ್ತಿದೆ.

ಗಡಿ ರಸ್ತೆಗಳ ಸಂಸ್ಥೆ ಶಿಬಿರದ ಬಳಿ ಭಾರಿ ಹಿಮಪಾತ ಸಂಭವಿಸಿದೆ. ಮೂವರು ಕಾರ್ಮಿಕರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸೇನಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಐಟಿಬಿಪಿ ಸೇನಾ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಹನುಮಾನ್ ಚಟ್ಟಿಯ ಆಚೆ ಹೆದ್ದಾರಿ ಮುಚ್ಚಲ್ಪಟ್ಟಿದೆ. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಸ್ಥಳಕ್ಕೆ ತೆರಳಿವೆ, ಆದರೆ ಹೆದ್ದಾರಿ ಮುಚ್ಚಿರುವುದರಿಂದ ಅವರು ದಾರಿಯಲ್ಲಿ ಸಿಲುಕಿಕೊಂಡಿದ್ದಾರೆ. ಮಾನಾ ಪಾಸ್ ಪ್ರದೇಶದಲ್ಲಿ 57 ಕಾರ್ಮಿಕರು ಇದ್ದಾರೆಂದು ವರದಿಯಾಗಿರುವುದಾಗಿ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ಸಂದೀಪ್ ತಿವಾರಿ ತಿಳಿಸಿದ್ದಾರೆ.

ಮಳೆ ಮತ್ತು ಹಿಮಪಾತದ ಹಿನ್ನೆಲೆಯಲ್ಲಿ ಚಮೋಲಿ ಜಿಲ್ಲೆಯಲ್ಲಿ ಐಆರ್‌ಎಸ್ ಅಧಿಕಾರಿಗಳಿಗೆ ಜಾಗರೂಕರಾಗಿರಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂದೀಪ್ ತಿವಾರಿ ಅವರು ಸೂಚನೆ ನೀಡಿದ್ದಾರೆ. ನಿರ್ಬಂಧಿತ ರಸ್ತೆಗಳಲ್ಲಿ ಸಂಚಾರ ಸುಗಮಗೊಳಿಸಲು ಮತ್ತು ಹಾನಿಗೊಳಗಾದ ವಿದ್ಯುತ್ ಮಾರ್ಗಗಳನ್ನು ಸರಿಪಡಿಸುವ ಮೂಲಕ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದುವರೆಗೂ ಜೀವಹಾನಿಯ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಈ ಪ್ರದೇಶದಲ್ಲಿ ನಿರಂತರವಾಗಿ ಭಾರೀ ಹಿಮಪಾತವಾಗುತ್ತಿದ್ದು ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net