ನಾಪತ್ತೆ ಬಳಿಕ ಕಾರಿನಲ್ಲಿ ಶವವಾಗಿ ಪತ್ತೆಯಾದ ಭಾರತೀಯ ಮಹಿಳೆಯ ಸಾವಿಗೆ ಕಾರಣವೇನು? ಕಗ್ಗಾಂಟಾದ ಮರಣೋತ್ತರ ಪರೀಕ್ಷೆ

Indian-amerca Women
Published on

ಷಿಕಾಗೋ: ನಾಪತ್ತೆಯಾಗಿದ್ದ ಭಾರತೀಯ ಮೂಲದ ಅಮೆರಿಕ ಮಹಿಳೆಯೊಬ್ಬಳು ತನ್ನ ಕಾರಿನಲ್ಲೇ ಶವವಾಗಿ ಕಳೆದ ಸೋಮವಾರ ಪತ್ತೆಯಾಗಿದ್ದಳು. ಇದೀಗ ಮರಣೋತ್ತರ ಪರೀಕ್ಷೆಯಲ್ಲಿಯೂ ಆಕೆಯ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಷಿಕಾಗೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುರೀಲಾ ಡಾಬಾವಾಲ(34) ಮೃತ ಮಹಿಳೆ. ಷಿಕಾಗೋದ ಲಯೋಲಾ ವಿಶ್ವವಿದ್ಯಾಲಯದಲ್ಲಿ ಎಬಿಎಂ ವಿದ್ಯಾರ್ಥಿನಿಯಾಗಿದ್ದ ಸುರೀಲಾ, ಕಳೆದ ಡಿಸೆಂಬರ್​ 30, 2019ರಂದು ನಾಪತ್ತೆಯಾಗಿದ್ದರು.

ಹಲವು ದಿನಗಳವರೆಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ತನ್ನ ಕಾರಿನ ಟ್ರಂಕ್​ ಒಳಗೆ ಬ್ಲ್ಯಾಂಕೆಟ್​ನಲ್ಲಿ ಸುತ್ತಿದ ರೀತಿಯಲ್ಲಿ ಸುರೀಲಾ ಶವ ಸೋಮವಾರ ಷಿಕಾಗೋದ ವೆಸ್ಟ್​ ಗ್ಯಾರಿಫೀಲ್ಡ್​ ಪಾರ್ಕ್​ ಬಳಿ ಪತ್ತೆಯಾಗಿತ್ತು.

ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ, ಇದೀಗ ಮರಣೋತ್ತರ ಪರೀಕ್ಷೆಯೂ ಸಾವಿಗೆ ಕಾರಣ ತಿಳಿಯುವಲ್ಲಿ ವಿಫಲವಾಗಿದ್ದು, ಮುಂದಿನ ತನಿಖೆ ಬಾಕಿ ಉಳಿದುಕೊಂಡಿದೆ. ಹೀಗಾಗಿ ಪ್ರಕರಣ ಸಂಬಂಧ ಈವರೆಗೂ ಯಾರನ್ನೂ ಬಂಧಿಸಲು ಷಿಕಾಗೋ ಪೊಲೀಸರಿಗೆ ಸಾಧ್ಯವಾಗಿಲ್ಲ.

ಮೃತದೇಹದಲ್ಲಿ ಯಾವುದೇ ಗಾಯದ ಕಲೆಗಳಿಲ್ಲ. ಅಲ್ಲದೆ, ಮೃತದೇಹ ವಾಹನದೊಳಗೆ ಹೇಗೆ ಬಂತು ಎಂಬುದು ಖಚಿತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಸಾರ್ವಜನಿಕರ ನೆರವು ಕೋರಲು ನಿರ್ಧರಿಸಿದ್ದಾರೆ.

ಅಂದಹಾಗೆ ಸುರೀಲಾ, ಶಾಂಬರ್ಗ್ ಮೂಲದ ಅಶರಾಫ್​ ದಾಬಾವಾಲ ಎಂಬುವರ ಮಗಳು. ಅಶರಾಫ್​ ದಾಬಾವಾಲ ಶಾಂಬರ್ಗ್​ ಏರಿಯಾದಲ್ಲಿ ಗೌರವಾನ್ವಿತ ವೈದ್ಯರಾಗಿದ್ದಾರೆ. ಮೂಲತಃ ಗುಜರಾತಿನವರಾಗಿದ್ದಾರೆ.

ಸುರೀಲಾ ಕಾಣೆಯಾದ ದಿನದಿಂದ ಆಕೆಯ ಬಗ್ಗೆ ಮಾಹಿತಿ ನೀಡಿದವರಿಗೆ 10 ಸಾವಿರ ಡಾಲರ್​(7,10,837 ರೂ.) ನೀಡುವುದಾಗಿ ಕುಟುಂಬ ಘೋಷಿಸಿತ್ತು. ಇದೀಗ ಸುರೀಲಾ ಶವವಾಗಿ ಪತ್ತೆಯಾಗಿರುವುದು ಕುಟುಂಬಕ್ಕೆ ಶಾಕ್​ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net