

ಮೈಸೂರು: ಬಾಡಿಗೆ ಉದ್ದೇಶಕ್ಕೋಸ್ಕರ ನಗರದಲ್ಲಿ ಅನಧಿಕೃತವಾಗಿ ಸಂಚರಿಸುತ್ತಿರುವ ಬೈಕ್‌ಗಳು ಹಾಗೂ ಎಲೆಕ್ಟ್ರಿಕಲ್ ವಾಹನಗಳ ಮಾಲೀಕರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾ ಘಟಕ ವತಿಯಿಂದ ನಗರದ ಆರ್‌ಟಿಒ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ವೈಟ್‌ಬೋರ್ಡ್ ಹೊಂದಿರುವ ಬೈಕ್‌ಗಳು ಹಾಗೂ ಎಲೆಕ್ಟ್ರಿಕ್ ಬೈಕ್‌ಗಳ ಸಂಚಾರದಿಂದ ಆಟೋ ಚಾಲಕರಿಗೆ ದುಡಿಮೆ ಇಲ್ಲದೆ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ಎರಡೂವರೆ ಸಾವಿರ ಬಾಡಿಗೆ ಬೈಕ್‌ಗಳು ಸಂಚರಿಸುತ್ತಿವೆ. ಬೈಕ್‌ಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಕಾನೂನಿನಲ್ಲಿ ಅವಕಾಶ ಇಲ್ಲದೆ ಇದ್ದರೂ ಕಾನೂನು ಬಾಹಿರವಾಗಿ ಬೈಕ್‌ಗಳು ಸಂಚರಿಸುತ್ತಿವೆ. ಈ ಕುರಿತು ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಜಿ. ಮುರುಗನ್ ಒತ್ತಾಯಿಸಿದರು.
ಪ್ರತಿಭಟನೆ ಬಳಿಕ ಆರ್‌ಟಿಒ ಕಚೇರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಜಿ. ನಾರಾಯಣಸ್ವಾಮಿ, ಬೆಂಗಳೂರು ನಗರಾಧ್ಯಕ್ಷ ಮಂಜೇಗೌಡ, ಜಿಲ್ಲಾಧ್ಯಕ್ಷ ಜಿ. ಮುರುಗನ್, ಪದಾಧಿಕಾರಿಗಳಾದ ಪಿ. ವಿನಾಯಕ, ಶಿವಕುಮಾರ್, ಸತ್ಯನಾರಾಯಣ ಸಿಂಗ್, ಸುರೇಶ್, ರಹಮತ್ ಉಲ್ಲಾ ಹಾಗೂ ಇತರರು ಪಾಲ್ಗೊಂಡಿದ್ದರು.