

ಶಿವಮೊಗ್ಗ: ನಗರದಲ್ಲಿ ಗುರುವಾರ ಶುರುವಾದ ರ‌್ಯಾಪಿಡೋ ಬೈಕ್ ಟ್ಯಾಕ್ಸಿಗೆ ಆಟೋ ಚಾಲಕರು, ಮಾಲೀಕರು ವಿರೋಧ ವ್ಯಕ್ತಪಡಿಸಿ ಎರಡು ವಾಹನಗಳನ್ನು ಜಯನಗರ ಠಾಣೆ ಪೊಲೀಸರಿಗೆ ಒಪ್ಪಿಸಿದರು.
ನಗರದ ದುರ್ಗಿಗುಡಿಯಲ್ಲಿ ರ‌್ಯಾಪಿಡೋ ಬೈಕ್ ಬಾಡಿಗೆ ಸೇವೆ ನೀಡುತ್ತಿದ್ದುದನ್ನು ಕಂಡ ಆಟೋ ಚಾಲಕರು ತಡೆದು ನಿಲ್ಲಿಸಿದ್ದು, ಪರವಾನಗಿ ಇಲ್ಲದ ಕುರಿತು ತರಾಟೆಗೆ ತೆಗೆದುಕೊಂಡರು. ಈಗಾಗಲೇ ಆಟೋಗಳಿಗೆ ಪ್ರಯಾಣಿಕರಿಲ್ಲದೆ ಕಂಗಾಲಾಗಿದ್ದೇವೆ. ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಹಾಗೂ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಬಾಡಿಗೆ ಕಡಿಮೆಯಾಗಿದೆ. ಇದರ ನಡುವೆ ಬಾಡಿಗೆ ಬೈಕ್ ಟ್ಯಾಕ್ಸಿ ಬಂದರೆ ಮತ್ತಷ್ಟು ತೊಂದರೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೈಕ್ ಟ್ಯಾಕ್ಸಿಗಳನ್ನು ನಿರ್ಬಂಧಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು.
ವೈಟ್ ಬೋರ್ಡ್ ಬೈಕ್‌ಗಳಲ್ಲಿ ಸೇವೆ ನೀಡುವುದು ಕಾನೂನಿಗೆ ವಿರುದ್ಧ ಮತ್ತು ಅದಕ್ಕೆ ಅವಕಾಶವಿಲ್ಲ ಎಂದು ಹೇಳಿ ಇಬ್ಬರು ರ‌್ಯಾಪಿಡೋ ಚಾಲಕರನ್ನು ಜಯನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಬಳಿಕ ಠಾಣಾಧಿಕಾರಿಗಳು ವಶಕ್ಕೆ ಪಡೆದು ಆಟೋ ಚಾಲಕರಿಗೆ ಲಿಖಿತ ದೂರು ನೀಡುವಂತೆ ಹೇಳಿ ಕಳುಹಿಸಿದರು.