ಸಿಮೆಂಟ್ ತಡೆಗೋಡೆ ಬಿದ್ದು ಆಟೋ ಚಾಲಕ ಸಾವು

accident-15
Published on

ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿ ಹಿನ್ನೆಲೆ ಲಾರಿಯಲ್ಲಿ ವಯಾಡೆಕ್ಟ್ (ಸಿಮೆಂಟ್ ತಡೆಗೋಡೆ) ಸಾಗಿಸುವಾಗ ಸರಪಳಿ ತುಂಡಾಗಿ ಪಕ್ಕದಲ್ಲಿ ಸಾಗುತ್ತಿದ್ದ ಆಟೋ ಮೇಲೆ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಹೆಗಡೆನಗರ ನಿವಾಸಿ ಖಾಸಿಂ ಸಾಬ್ (35) ಮೃತ ಆಟೋ ಚಾಲಕ. ಮಂಗಳವಾರ ರಾತ್ರಿ 12 ಗಂಟೆಗೆ ಕೋಗಿಲು ಕ್ರಾಸ್ ಬಳಿ ಘಟನೆ ನಡೆದಿದೆ. ಆಟೋದಲ್ಲಿದ್ದ ಪ್ರಯಾಣಿಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆಟ್ರೋ ಕಾಮಗಾರಿ ಸಂಬಂಧ 18 ಚಕ್ರದ ಲಾರಿಯಲ್ಲಿ ವಯಾಡೆಕ್ಟ್‌ಗಳನ್ನು ಸಾಗಿಸಲಾಗುತ್ತಿತ್ತು. ಕೋಗಿಲು ಕ್ರಾಸ್ ಬಳಿ ಲಾರಿಯನ್ನು ತಿರುವು ಪಡೆಯುವಾಗ ಸರಪಳಿ ತುಂಡಾಗಿ ಬೃಹದಾಕಾರದ ವಯಾಡಕ್ಟ್ ಪಕ್ಕದಲ್ಲೇ ಬರುತ್ತಿದ್ದ ಆಟೋ ಮೇಲೆ ಉರುಳಿ ಬಿದ್ದಿದೆ. ಆಟೋ ಸಂಪೂರ್ಣ ನಜ್ಜುಗುಜ್ಜಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಕ್ರೇನ್ ತರಿಸಿ ಆಟೋ ಮೇಲೆ ಬಿದ್ದಿದ್ದ ವಯಾಡೆಕ್ಟ್ ತೆರವುಗೊಳಿಸಿದರು. ಖಾಸಿಂ ಖಾನ್ ಮೃತದೇಹವನ್ನು ಹೊರಗೆ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.

ಈ ಸಂಬಂಧ ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net