

ಬೆಂಗಳೂರು: ನಿಯಂತ್ರಣ ತಪ್ಪಿ ರಸ್ತೆ ವಿಭಜಕದಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಸ್ವಯಂ ಅಪಘಾತದಲ್ಲಿ ಸಹೋದರರಿಬ್ಬರು ಮೃತಪಟ್ಟಿದ್ದಾರೆ.
ಹೆಬ್ಬಾಳ ಹೊರ ವರ್ತುಲ ರಸ್ತೆಯ ದೇವಿನಗರ ಬಸ್ ನಿಲ್ದಾಣದ ಬಳಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.ದೊಡ್ಡಬೊಮ್ಮಸಂದ್ರದ ನಾಗರಾಜ್ ಮತ್ತು ಅವರ ಚಿಕ್ಕಮ್ಮನ ಮಗ ರಾಜೇಶ್‌ಕುಮಾರ್ ಮೃತಪಟ್ಟವರು.
ನಾಗರಾಜ್ ತಮ್ಮ ಬೈಕ್‌ನಲ್ಲಿ ರಾಜೇಶ್‌ಕುಮಾರ್‌ರನ್ನು ನಾಗರಬಾವಿಯಲ್ಲಿನ ಮನೆಗೆ ಡ್ರಾಪ್ ಮಾಡಲು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಬುಧವಾರ ಮಧ್ಯರಾತ್ರಿ ೧ ಗಂಟೆಯ ಸುಮಾರಿಗೆ ಅಜಾಗರೂಕತೆಯಿಂದ ತುಂಬಾ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದ ನಾಗರಾಜ್, ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ವಾಹನ ಗುದ್ದಿಸಿದ್ದಾರೆ. ನಂತರ ಅಡ್ಡಾದಿಡ್ಡಿ ಚಲಿಸಿದ ಬೈಕ್, ರಸ್ತೆ ವಿಭಜಕದಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ನಾಗರಾಜ್ ಮತ್ತು ರಾಜೇಶ್‌ಕುಮಾರ್‌ರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಸಂದರ್ಭದಲ್ಲಿ ಇಬ್ಬರೂ ಹೆಲ್ಮೆಟ್ ಧರಿಸಿದ್ದರು. ಆದರೆ, ಅಪಘಾತದ ತೀವ್ರತೆಗೆ ಹೆಲ್ಮೆಟ್‌ಗಳು ನಜ್ಜುಗುಜ್ಜಾಗಿ ತಲೆಗೆ ಪೆಟ್ಟು ಬಿದ್ದು ಇಬ್ಬರೂ ಸಾವನ್ನಪ್ಪಿದ್ದಾರೆ. ನಾಗರಾಜ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪದವೀಧರರಾದ ರಾಜೇಶ್‌ಕುಮಾರ್, ಉದ್ಯೋಗದ ಹುಡುಕಾಟದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಬ್ಬಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.