

ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರಲಿದ್ದಾರೆ. ಮೊದಲ ಬಾರಿಗೆ ಭಾರತಕ್ಕೆ ಬರುತ್ತಿರುವ ಟ್ರಂಪ್ ಫೆ.24 ಮತ್ತು 25ರಂದು ಎರಡು ದಿನಗಳ ಪ್ರವಾಸವನ್ನು ಕೈಗೊಳ್ಳಲಿದ್ದು, ಅಹಮದಾಬಾದ್ನಲ್ಲಿ ನಿರ್ಮಾಣವಾಗಿರುವ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆಂದು ಮಾಡುತ್ತಿರುವ ಖರ್ಚಿನ ವರದಿ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ.
ಅಹಮದಾಬಾದ್ನ ಮೊಟೆರೋದಲ್ಲಿ ಕ್ರೀಡಾಂಗಣ ಉದ್ಘಾಟನೆ ಕಾರ್ಯಕ್ರಮಕ್ಕೆಂದು ಸರಿಸುಮಾರು 100 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗುತ್ತಿದೆ. ಇದು ಗುಜರಾತ್ ಸರ್ಕಾರ ಪ್ರತಿ ವರ್ಷ ಮಂಡಿಸುವ ಮಂಡಿಸುವ ಬಜೆಟ್ನ 1.5 ಭಾಗದಷ್ಟಾಗಿದೆ.
ಟ್ರಂಪ್ಗೆ ಭಾರತ ಸುಂದರ ದೇಶವಾಗಿ ಕಾಣಬೇಕೆಂಬ ಕಾರಣಕ್ಕಾಗಿ ಅನೇಕ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಟ್ರಂಪ್ ಅಹಮದಾಬಾದ್ನ ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮ ತಲುಪಲಿದ್ದು ಅಲ್ಲಿಂದ ರೋಡ್ ಶೋ ಮುಖಾಂತರವಾಗಿ ಮೊಟೆರಾ ತಲುಪಲಿದ್ದಾರೆ. ಟ್ರಂಪ್ ಓಡಾಡುವ 18 ರಸ್ತೆಗಳನ್ನೂ (22ಕಿ.ಮೀ) ಸಹ ವಿಸ್ತರಿಸಲಾಗುತ್ತಿದ್ದು, ರಸ್ತೆಯ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ. ರಸ್ತೆ ವಿಸ್ತರಣೆಗೆಂದೇ 300 ಮಿಲಿಯನ್ ಹಣ ಖರ್ಚು ಮಾಡಲಾಗಿದೆ. ರೋಡ್ ಶೋ ಹೋಗುವ ದಾರಿಯಲ್ಲಿ ಕಾಣ ಸಿಗುವ ಸ್ಲಂ ಟ್ರಂಪ್ಗೆ ಕಾಣದಿರಲಿ ಎಂಬ ಕಾರಣದಿಂದ 7 ಅಡಿ ಎತ್ತರದ ಗೋಡೆ ಕಟ್ಟಲಾಗಿದೆ. ಮೊಟೆರಾದ ಕ್ರೀಡಾಂಗಣದ ಸುತ್ತಮುತ್ತ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ.
ಟ್ರಂಪ್ನ ಈ ಕಾರ್ಯಕ್ರಮಕ್ಕೆ ಸುಮರು 800ರಿಂದ 850 ಮಿಲಿಯನ್ ಹಣ ಬೇಕಾಗಬಹುದು ಎಂದು ಅಂದಾಜಿಲಾಗಿತ್ತು. ಆದರೆ ಈಗ ಅಷ್ಟು ಸಾಕಾಗುವುದಿಲ್ಲ ಎನ್ನಲಾಗಿದೆ. ನಗರದ ಅಲಂಕಾರಕ್ಕಾಗಿ ಇನ್ನೂ 60 ಮಿಲಿಯನ್ ಹಣ ಬೇಕಾಗುತ್ತದೆ ಎನ್ನಲಾಗಿದೆ. ಟ್ರಂಪ್ ಅಹಮದಾಬಾದ್ನಲ್ಲಿ ಕೇವಲ 3 ಗಂಟೆಗಳ ಕಾಲ ಇರಲಿದ್ದು ಅದಕ್ಕಾಗಿ 100 ಕೋಟಿ ಹಣ ಖರ್ಚು ಮಾಡುತ್ತಿರುವ ಬಗ್ಗೆ ಸಾಕಷ್ಟು ಚರ್ಚೆ ಉಂಟಾಗಿದೆ.
ಕ್ರೀಡಾಂಗಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. 50 ಸಾವಿರ ಜನರು ರೋಡ್ ಶೋನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಟ್ರಂಪ್ ಅಹಮದಾಬಾದ್ನ ಜತೆ ಆಗ್ರಾಕ್ಕೂ ಭೇಟಿ ನೀಡಲಿದ್ದು ಆಗ್ರಾದಲ್ಲಿಯೂ ಸಹ ಭಾರೀ ಸಿದ್ಧತೆಗಳನ್ನು ನಡೆಸಿಕೊಳ್ಳಲಾಗುತ್ತಿದೆ. (ಏಜೆನ್ಸೀಸ್)