

ಸಿಡ್ನಿ: ಕೊರೊನಾ ವೈರಸ್ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹಲವು ವಸ್ತುಗಳ ಕೊರತೆಗೂ ಕಾರಣವಾಗಿದೆ. ಆಸ್ಟ್ರೇಲಿಯಾ, ಸಿಂಗಪೂರ್ನಂತಹ ಕೆಲವು ದೇಶಗಳಲ್ಲಿ ಮಾಸ್ಕ್, ಟಾಯ್ಲೆಟ್ ಪೇಪರ್, ಹ್ಯಾಂಡ್ ಸ್ಯಾನಿಟೈಸರ್ನಂತಹ ಸ್ವಚ್ಛತಾ ವಸ್ತುಗಳ ಬೇಡಿಕೆ ಹೆಚ್ಚಿದ್ದು, ಪೂರೈಕೆಯಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ.
ಕೊರೊನಾ ಭೀತಿಯಿಂದ ಈ ವಸ್ತುಗಳನ್ನೆಲ್ಲ ತಯಾರಿಸುವ ಕಾರ್ಖಾನೆಗಳೂ ಕೆಲವೆಡೆ ಮುಚ್ಚಲ್ಪಟ್ಟಿವೆ. ಆಸ್ಟ್ರೇಲಿಯಾ, ಚೀನಾ ಸೇರಿ ಕೆಲವು ದೇಶಗಳಲ್ಲಿ ಟಾಯ್ಲೆಟ್ ಪೇಪರ್ಗಳ ಅಗತ್ಯ ಎಷ್ಟು ಕಾಡುತ್ತಿದೆಯೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಅದಕ್ಕೆ ಸಂಬಂಧಪಟ್ಟ ಹ್ಯಾಷ್ಟ್ಯಾಗ್ಗಳು ಟ್ರೆಂಡ್ ಆಗುತ್ತಿವೆ. (#ToiletPaperEmergency (#ToiletPaperApocalypse). ಒಂದರ್ಥದಲ್ಲಿ ಟಾಯ್ಲೆಟ್ ಪೇಪರ್ಗಳ ಕೊರತೆಯಿಂದ ಜನರು ಕಂಗಾಲಾಗಿದ್ದಾರೆ ಎಂದೇ ಹೇಳಬಹುದು.
ಹೀಗಿರುವಾಗ ಆಸ್ಟ್ರೇಲಿಯಾದ ನ್ಯೂಸ್ ಪೇಪರ್ವೊಂದು ವಿಭಿನ್ನ ನಿರ್ಧಾರ ತೆಗೆದುಕೊಂಡಿದೆ. ಹೆಚ್ಚುವರಿ ಪುಟಗಳನ್ನು ತನ್ನ ಓದುಗರಿಗೆ ನೀಡುತ್ತಿದೆ. The NT News ಎಂಬ ಪತ್ರಿಕೆ ಈ ಸಮಯದಲ್ಲಿ ಜನರಿಗೆ ಅನುಕೂಲ ಮಾಡಿಕೊಡುತ್ತ, ತನ್ನ ಪ್ರಸರಣವನ್ನೂ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
#toiletpapercrisis ಎಂಬ ಹ್ಯಾಷ್ಟ್ಯಾಗ್ನಡಿ ವಿಡಿಯೋ ಪೋಸ್ಟ್ ಮಾಡಿರುವ ದಿ ಎನ್ಟಿ ನ್ಯೂಸ್ ಪತ್ರಿಕೆ, ಹೆಚ್ಚುವರಿ ಪುಟಗಳನ್ನು ಮುದ್ರಿಸಿದ್ದನ್ನು ತೋರಿಸಿದೆ. ಟಾಯ್ಲೆಟ್ ಪೇಪರ್ಗಳನ್ನಾಗಿ ಬಳಸಬಹುದಾದ ಪುಟಗಳನ್ನು ಖಾಲಿಯಾಗಿ ಹಾಗೇ ಬಿಟ್ಟಿದೆ. ಅದರಲ್ಲಿ ಯಾವುದೇ ಸುದ್ದಿಯನ್ನೂ ಪ್ರಕಟಿಸಿಲ್ಲ.
ಒಟ್ಟು ಎಂಟು ಪುಟಗಳನ್ನು ಅಂದರೆ ನಾಲ್ಕು ಹಾಳೆಗಳನ್ನು ಹೆಚ್ಚುವರಿಯಾಗಿ ಇಟ್ಟಿದ್ದು, ಅದನ್ನು ಸುಲಭವಾಗಿ ಟಾಯ್ಲೆಟ್ ಪೇಪರ್ನಂತೆ ಕತ್ತರಿಸಬಹುದಾಗಿದೆ.
ಈ ವಿಡಿಯೋ ಟ್ವಿಟರ್ನಲ್ಲಿ ಪೋಸ್ಟ್ ಆಗುತ್ತಿದ್ದಂತೆ ನೆಟ್ಟಿಗರ ಗಮನ ಸೆಳೆದಿದೆ. ಮಾರ್ಚ್ 5ರಿಂದ ಇಲ್ಲಿಯವರೆಗೆ ಸುಮಾರು 3ಲಕ್ಷದ 47 ಸಾವಿರ ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ. 1.7 ಸಾವಿರ ರೀಟ್ವೀಟ್ ಆಗಿದೆ.