

ನವದೆಹಲಿ: ಅಂತಾರಾಷ್ಟ್ರೀಯ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿರುವ ಆಸ್ಟ್ರೇಲಿಯಾ, ಭಾರತದ ಮೇಡ್ ಇನ್ ಇಂಡಿಯಾ ಲಸಿಕೆ ಕೊವ್ಯಾಕ್ಸಿನ್ಗೆ ಸೋಮವಾರ ಮಾನ್ಯತೆ ನೀಡಿದೆ. ಸುಮಾರು 18 ತಿಂಗಳಿಗಿಂತ ಹೆಚ್ಚು ಕಾಲದಿಂದ ಜಾರಿಯಲ್ಲಿದ್ದ ಅತಿ ಕಠಿಣ ಗಡಿ ನಿರ್ಬಂಧಗಳನ್ನು ತೆಗೆದು ಹಾಕಿರುವುದರಿಂದ ಲಕ್ಷಾಂತರ ಜನರು ಪರ್ವಿುಟ್ ಇಲ್ಲದೆ ಪ್ರಯಾಣಿಸಬಹುದಾಗಿದೆ ಅಥವಾ ದೇಶಕ್ಕೆ ಬಂದಾಗ ಕ್ವಾರಂಟೈನ್ಗೆ ಒಳಪಡುವ ಅಗತ್ಯವಿಲ್ಲ. ಭಾರತ್ ಬಯೋಟೆಕ್ ಉತ್ಪಾದನೆಯ ಕೊವ್ಯಾಕ್ಸಿನ್ ಮತ್ತು ಚೀನಾದ ಸಿನೋಫಾರ್ವದ ಬಿಬಿಐಬಿಪಿ-ಕಾರ್ವಿ ಲಸಿಕೆಗಳನ್ನು ಪಡೆದವರಿಗೆ ಪ್ರಯಾಣಿಕರ ವ್ಯಾಕ್ಸಿನೇಷನ್ ಸ್ಟೇಟಸ್ಗೆ ಮಾನ್ಯ ಮಾಡಲಾಗುತ್ತದೆ ಎಂದು ಆಸ್ಟ್ರೇಲಿಯಾ ಸರ್ಕಾರ ಪ್ರಕಟಿಸಿದೆ. ಕೊವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡ 12 ವರ್ಷ ಮೇಲ್ಪಟ್ಟವರು ಮತ್ತು ಬಿಬಿಐಬಿಪಿ-ಕಾರ್ವಿ ಪಡೆದ 18-60 ವಯಸ್ಸಿನವರಿಗೆ ಈ ನಿಯಮ ಅನ್ವಯವಾಗುತ್ತದೆ. ಈ ಎರಡು ಲಸಿಕೆಗಳು ವ್ಯಾಪಕ ಬಳಕೆಯಲ್ಲಿರುವ ಈ ವಲಯದ ದೇಶಗಳ ನಾಗರಿಕರು ಆಸ್ಟ್ರೇಲಿಯಾ ಪ್ರವೇಶಿ ಸಿದಾಗ ಸಂಪೂರ್ಣ ಲಸಿಕೆ ಹಾಕಿಸಿಕೊಂಡವರು ಎಂದು ಪರಿಗಣಿಸಲಾಗುತ್ತದೆ.
ಡಬ್ಲ್ಯುಎಚ್ಒಗೆ ಡೇಟಾ ಸಲ್ಲಿಕೆ: ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ಪಡೆಯುವ ಸಂಬಂಧ ಭಾರತ್ ಬಯೋಟೆಕ್ ಕಂಪೆನಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕೋರಿದ್ದ ಹೆಚ್ಚುವರಿ ಡೇಟಾವನ್ನು ಸಲ್ಲಿಸಿದೆ. ಸಂಸ್ಥೆಯ ತಾಂತ್ರಿಕ ಗುಂಪಿನ ಸಭೆ ನವೆಂಬರ್ 3ರಂದು ನಡೆಯಲಿದೆ.
12,514 ಹೊಸ ಕೇಸ್: ಸೋಮವಾರ ಬೆಳಗ್ಗೆವರೆಗಿನ 24 ಗಂಟೆ ಅವಧಿಯಲ್ಲಿ ದೇಶದಾದ್ಯಂತ ಕರೊನಾ ಸೋಂಕಿನ 12,514 ಹೊಸ ಕೇಸ್ಗಳು ದೃಢಪಟ್ಟಿವೆ. ಇದು ಭಾನುವಾರದ್ದಕ್ಕಿಂತ ಶೇಕಡ 2.4 ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಅವಧಿಯಲ್ಲಿ 251 ಜನರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 248 ದಿನಗಳಲ್ಲಿ ಕನಿಷ್ಠ 1,58,817 ಆಗಿದೆ. ಹೊಸ ಪ್ರಕರಣಗಳಲ್ಲಿ ಕೇರಳದ ಪಾಲು 7,167 ಆಗಿದೆ. ದೈನಿಕ ಸಾವಿನಲ್ಲಿ ಕೇರಳದಲ್ಲೇ 167 ಮಂದಿ ಸೇರಿದ್ದಾರೆ.
8 ರಾಜ್ಯಗಳ ಪಾಲೇ ಅಧಿಕ: ಕರೊನಾ ಸೋಂಕಿನ ದೈನಿಕ ಪ್ರಕರಣಗಳ ಸಂಖ್ಯೆ ಸತತ 24ನೇ ದಿನವೂ 20,000ಕ್ಕಿಂತ ಕಡಿಮೆಯಿದ್ದರೂ ಎಂಟು ರಾಜ್ಯಗಳಲ್ಲಿ ಕೇಸ್ಗಳು ಅಧಿಕವಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಈ ಪೈಕಿ ಕರ್ನಾಟಕ 7ನೇ ಹೆಚ್ಚು ದೈನಿಕ ಸೋಂಕು ದಾಖಲಾದ ರಾಜ್ಯವಾಗಿದೆ. ಕೇರಳ-7,167 ಮಹಾರಾಷ್ಟ್ರ -1,172. ತಮಿಳುನಾಡು -1,009, ಪಶ್ಚಿಮ ಬಂಗಾಳ -914, ಒಡಿಶಾ -488, ಆಂಧ್ರ ಪ್ರದೇಶ -385, ಕರ್ನಾಟಕ -292, ಅಸ್ಸಾಂ -212.
50 ಲಕ್ಷ ಮೀರಿದ ಜಾಗತಿಕ ಸಾವು: ಕರೊನಾ ಸೋಂಕು ಅಪ್ಪಳಿಸಿದ ಎರಡು ವರ್ಷ ಕ್ಕಿಂತ ಕಡಿಮೆ ಅವಧಿಯೊಳಗೆ ಜಾಗತಿಕ ಸಾವಿನ ಸಂಖ್ಯೆ ಸೋಮವಾರ 50 ಲಕ್ಷವನ್ನು ದಾಟಿದೆ. ಬಡ ದೇಶಗಳು ಮಾತ್ರವಲ್ಲದೆ ಅಮೆರಿಕ ಸಹಿತ ಅನೇಕ ಶ್ರೀಮಂತ ದೇಶಗಳು ಕೂಡ ಸಾಂಕ್ರಾಮಿಕತೆಯ ಏಟಿನಿಂದ ನಲುಗಿ ಹೋಗಿವೆ. ಅಮೆರಿಕ ಒಂದರಲ್ಲೇ 7,40,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.