ಟಿ20 ವಿಶ್ವಕಪ್ ಟೂರ್ನಿ; ಅಲ್ಪಮೊತ್ತ ಬೆನ್ನಟ್ಟಲು ಪರದಾಡಿದ ಆಸೀಸ್

SOUTH AFRICA AND AUSTRALIA FOR WEB
Published on

ಅಬುಧಾಬಿ: ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿರುವ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ 5 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಶುಭಾರಂಭ ಕಂಡಿತು. ಟೂರ್ನಿಯ ಸೂಪರ್ 12 ಹಂತದ ಮೊದಲ ಹಣಾಹಣಿಯೇ ಬೌಲರ್‌ಗಳ ಪಾರಮ್ಯಕ್ಕೆ ಸಾಕ್ಷಿಯಾಯಿತು. ಶೇಖ್ ಜಯೇದ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಆಸ್ಟ್ರೇಲಿಯಾ ತಿಣುಕಾಡಿ ಗೆಲುವಿನ ದಡ ಸೇರಿತು. ಮಾರ್ಕಸ್ ಸ್ಟೋಯಿನಿಸ್ (24*ರನ್, 16 ಎಸೆತ, 3 ಬೌಂಡರಿ) ಕಡೇ ಓವರ್‌ನಲ್ಲಿ ಗೆಲುವಿಗೆ ಅಗತ್ಯವಿದ್ದ 8 ರನ್ ಕಸಿದು ತಂಡಕ್ಕೆ ಆಸರೆಯಾದರು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ದ.ಆಫ್ರಿಕಾ ತಂಡ ಆಸೀಸ್ ಬೌಲರ್‌ಗಳ ದಾಳಿಗೆ ಆಘಾತ ಕಂಡಿತು. ಏಡೆನ್ ಮಾರ್ಕ್ರಮ್ (40 ರನ್, 36 ಎಸೆತ, 3 ಬೌಂಡರಿ, 1 ಸಿಕ್ಸರ್) ಏಕಾಂಗಿ ನಿರ್ವಹಣೆ ಫಲವಾಗಿ 9 ವಿಕೆಟ್‌ಗೆ 118 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಅಲ್ಪಮೊತ್ತ ಬೆನ್ನಟ್ಟಿದ ಆಸ್ಟ್ರೇಲಿಯಾ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 121 ರನ್‌ಗಳಿಸಿ ಜಯದ ನಗೆ ಬೀರಿತು.

ದಕ್ಷಿಣ ಆಫ್ರಿಕಾ: 9 ವಿಕೆಟ್‌ಗೆ 118 (ತೆಂಬಾ ಬವುಮಾ 12, ಮಾರ್ಕ್ರಮ್ 40, ಕಗಿಸೊ ರಬಾಡ 19*, ಮಿಚೆಲ್ ಸ್ಟಾರ್ಕ್ 32ಕ್ಕೆ 2, ಜೋಸ್ ಹ್ಯಾಸಲ್‌ವುಡ್ 19ಕ್ಕೆ 2, ಆಡಂ ಜಂಪಾ 21ಕ್ಕೆ 2), ಆಸ್ಟ್ರೇಲಿಯಾ: 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 121 (ಡೇವಿಡ್ ವಾರ್ನರ್ 14, ಸ್ಟೀವನ್ ಸ್ಮಿತ್ 35, ಗ್ಲೆನ್ ಮ್ಯಾಕ್ಸ್‌ವೆಲ್ 18, ಮಾರ್ಕಸ್ ಸ್ಟೋಯಿನಿಸ್ 24*, ಮ್ಯಾಥ್ಯೂ ವೇಡ್ 15*, ಅನ್ರಿಚ್ ನೋಯಿಕ 21ಕ್ಕೆ 2).

* 3: ತಬರೇಜ್ ಶಮ್ಸಿ, ಟಿ20 ಕ್ರಿಕೆಟ್‌ನಲ್ಲಿ 50 ವಿಕೆಟ್ ಕಬಳಿಸಿದ ದ.ಆಫ್ರಿಕಾದ 3 ಬೌಲರ್ ಎನಿಸಿಕೊಂಡರು. ಡೇಲ್ ಸ್ಟೈನ್ (64) ಹಾಗೂ ಇಮ್ರಾನ್ ತಾಹಿರ್ (61) ಮೊದಲ ಎರಡು ಸ್ಥಾನದಲ್ಲಿದ್ದಾರೆ.

* 6: ಆರನ್ ಫಿಂಚ್, ಟಿ20 ಕ್ರಿಕೆಟ್‌ನಲ್ಲಿ ನಾಯಕನಾಗಿ 6ನೇ ಬಾರಿ ಶೂನ್ಯ ಸುತ್ತಿದರು.

* 2: ಆರನ್ ಫಿಂಚ್, ಟಿ20 ವಿಶ್ವಕಪ್‌ನಲ್ಲಿ ಶೂನ್ಯ ಸುತ್ತಿದ ಆಸ್ಟ್ರೇಲಿಯಾದ 2ನೇ ನಾಯಕ ಎನಿಸಿಕೊಂಡರು. 2009ರಲ್ಲಿ ರಿಕಿ ಪಾಂಟಿಂಗ್ ಮೊದಲ ನಾಯಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net