ನಿರಂಕುಶಾಧಿಕಾರಿ ಅಲ್ಲ, ಅಖಂಡ ಭಾರತವನ್ನು ನಿರ್ಮಿಸಿದಾತ; ಔರಂಗಜೇಬ್​​​ನನ್ನು ಹೊಗಳಿದ ಕಾಂಗ್ರೆಸ್ ಸಂಸದ

Aurangazeb Congress SP
Published on

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮೊಘಲ್ ದೊರೆ ಔರಂಗಜೇಬ್ ಕುರಿತಾಗಿ ಸಮಾಜವಾದಿ ಪಕ್ಷದ ಶಾಸಕ  ಅಬು ಅಜ್ಮಿ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಗದ್ದಲಕ್ಕೆ ಕಾರಣವಾಗಿದ್ದು, ಅನು ಅಜ್ಮಿರನ್ನು ವಿಧಾನಸಭೆಯಿಂದ ಅಮಾತು ಮಾಡಲಾಗಿದೆ. ಅಬು ಅಜ್ಮಿ ಹೇಳಿಕೆಯ ನಡುವೆಯೇ ಕಾಂಗ್ರೆಸ್​ ಸಂಸದರೊಬ್ಬರು (Congress MP) ಔರಂಗಜೇಬ್​ರನ್ನು ಹಾಡಿ ಹೊಗಳಿದ್ದು, ಮತ್ತೊಂದು ಸುತ್ತಿನ ವಿವಾದಕ್ಕೆ ನಾಂದಿ ಹಾಡಿದೆ.

ಶಾಸಕ ಅಬು ಅಜ್ಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಉತ್ತರಪ್ರದೇಶದ ಸಹರಾನ್ಪುರ ಕ್ಷೇತ್ರದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್​, ಔರಂಗಜೇಬ್ ಒಬ್ಬ ನಿರಂಕುಶಾಧಿಕಾರಿಯಲ್ಲ. ಆತ 49 ವರ್ಷಗಳ ಕಾಲ ದೇಶವನ್ನು ಆಳಿದ್ದಾನೆ. ಆ ಸಮಯದಲ್ಲಿ ಜಿಡಿಪಿ ಎಲ್ಲಿತ್ತು. ನೀವು ಮೊದಲಿಗೆ ಇತಿಹಾಸವನ್ನು ಓದಿದರೆ ನಿಮಗೆ ತಿಳಿಯುತ್ತದೆ ಆತ ಎಂತಹ ಆಡಳಿತಗಾರ ಎಂಬುದು. ಔರಂಗಜೇಬ್ ಆಡಳಿತದಲ್ಲಿ ಭಾರತ ದೇಶವು ಅಖಂಡವಾಗಿತ್ತು. ಮೊದಲು ಇತಿಹಾಸ ಓದಿ ಆ ನಂತರ ಆತ ಎಂತಹ ಆಡಳಿತಗಾರ ಎಂಬುದು ನಿಮಗೆ ತಿಳಿಯುತ್ತದೆ ಎಂದು ಕಾಂಗ್ರೆಸ್​ ಸಂಸದ (Congress MP) ಇಮ್ರಾನ್ ಮಸೂದ್ ಹೇಳಿದ್ದಾರೆ.

ಶಾಸಕ ಅಬು ಅಜ್ಮಿ ಹೇಳಿದ್ದೇನು? 

ಸೋಮವಾರ (ಮಾರ್ಚ್ 3) ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಮೊಘಲ್ ದೊರೆ ಔರಂಗಜೇಬನನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹೊಗಳಿದ್ದರು. ಔರಂಗಜೇಬನು ನ್ಯಾಯವನ್ನು ಪ್ರೀತಿಸುವ ರಾಜನಾಗಿದ್ದನು. ಅವನ ಅಧಿಕಾರಾವಧಿಯಲ್ಲಿ ಭಾರತವು ಚಿನ್ನದ ಹಕ್ಕಿಯಾಯಿತು. ನಾನು ಔರಂಗಜೇಬನನ್ನು ಕ್ರೂರ ಆಡಳಿತಗಾರ ಎಂದು ಪರಿಗಣಿಸುವುದಿಲ್ಲ. ಔರಂಗಜೇಬನ ಕಾಲದಲ್ಲಿ, ಆಡಳಿತಕ್ಕಾಗಿ ಹೋರಾಟ ನಡೆದಿತ್ತು, ಧರ್ಮಕ್ಕಾಗಿ ಅಲ್ಲ, ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಯಾವುದೇ ಹೋರಾಟ ಇರಲಿಲ್ಲ. ಔರಂಗಜೇಬನು ತನ್ನ ಅಧಿಕಾರಾವಧಿಯಲ್ಲಿ ಅನೇಕ ಹಿಂದೂ ದೇವಾಲಯಗಳನ್ನು ನಿರ್ಮಿಸಿದನು. ಔರಂಗಜೇಬನ ಬಗ್ಗೆ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ ಎಂದು ಅಬು ಅಜ್ಮಿ ಹೇಳಿದ್ದರು.

ಬಳಿಕ ಈ ಹೇಳಿಕೆ ವ್ಯಾಪಕ ಖಂಡನೆಗೆ ಗುರಿಯಾಗಿತ್ತು ಮತ್ತು ಶಾಸಕ ಅನು ಅಜ್ಮಿ ಅವರನ್ನು ವಿಧಾನಸಭೆಯಿಂದ ಅಮಾನತು ಮಾಡಲಾಗಿತ್ತು. ನಾನು ಛತ್ರಪತಿ ಶಿವಾಜಿ ಮಹಾರಾಜ್, ಸಂಭಾಜಿ ಮಹಾರಾಜ್ ಅಥವಾ ಇತರ ಯಾವುದೇ ಮಹಾನ್ ವ್ಯಕ್ತಿಗಳ ಬಗ್ಗೆ ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಆದರೆ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ನಾನು ನನ್ನ ಮಾತುಗಳನ್ನು, ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ಶಾಸಕ ಅಬು ಅಜ್ಮಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net