ಮಾರ್ಚ್ ಅಂತ್ಯದಲ್ಲಿ ವಾಹನಗಳ ಹರಾಜು

30.pyp.01
Published on

ಪಿರಿಯಾಪಟ್ಟಣ: ಅಬಕಾರಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿರುವ ವಾಹನಗಳನ್ನು ಮಾರ್ಚ್ ಅಂತ್ಯದ ವೇಳೆಗೆ ಬಹಿರಂಗ ಹರಾಜು ಮಾಡಲು ತೀರ್ಮಾನಿಸಲಾಗಿದೆ ಎಂದು ಅಬಕಾರಿ ಹುಣಸೂರು ಉಪ ವಿಭಾಗದ ಉಪ ಅಧೀಕ್ಷಕ ಗಂಗಾಧರ್.ಎಚ್. ಮುದ್ದಣ್ಣನವರ ತಿಳಿಸಿದರು.

ಪಟ್ಟಣದ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಮುಟ್ಟುಗೋಲು ವಾಹನಗಳ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜ್ಯಾದ್ಯಂತ ಎಲ್ಲ ಕಚೇರಿಗಳಲ್ಲೂ ಈವರೆಗೆ ಮುಟ್ಟುಗೋಲು ಹಾಕಿಕೊಂಡಿರುವ ವಾಹನಗಳನ್ನು ಮಾರ್ಚ್ ಅಂತ್ಯದ ವೇಳೆಗೆ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡುವಂತೆ ಹಿರಿಯ ಅಧಿಕಾರಿಗಳಿಂದ ಆದೇಶ ಬಂದಿದೆ. ಆ ನಿಟ್ಟಿನಲ್ಲಿ ಎಲ್ಲ ಅಬಕಾರಿ ಕಚೇರಿಗಳಲ್ಲೂ ವಾಹನಗಳನ್ನು ಹರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹರಾಜಿನಲ್ಲಿ ಭಾಗವಹಿಸಿ ವಾಹನಗಳನ್ನು ಖರೀದಿಸಿದ ಗ್ರಾಹಕರಿಗೆ ಇಲಾಖೆಯಿಂದ ಸೂಕ್ತ ದಾಖಲಾತಿಗಳನ್ನು ನೀಡುತ್ತಿಲ್ಲ ಎಂದು ಆರೋಪ ಕೇಳಿಬರುತ್ತಿದ್ದು, ಈ ಸಮಸ್ಯೆ ಕುರಿತಾಗಿ ಆರ್‌ಟಿಒ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಶೀಘ್ರವಾಗಿ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಗುರುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ 11ದ್ವಿಚಕ್ರ ವಾಹನಗಳು ಹರಾಜಿನಲ್ಲಿ ಮಾರಾಟವಾಗುವ ಮೂಲಕ ಇಲಾಖೆಗೆ 127300.ರೂ.ಸಂದಾಯವಾಯಿತು ಎಂದು ತಿಳಿಸಿದರು. ಅಬಕಾರಿ ನಿರೀಕ್ಷಕ ಧರಣೇಶ್, ಉಪ ನಿರೀಕ್ಷಕ ವೆಂಕಟೇಶ್ ಸೇರಿದಂತೆ ಅಬಕಾರಿ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net