

ಕಳೆದ ಕೆಲ ತಿಂಗಳುಗಳಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ವಿವಿಧ ಬೆಳವಣಿಗೆಗಳಿಗೆ ಕಾರಣವಾಯಿತು. ಒಂದೆಡೆ ಕರೊನಾ ಎರಡನೆಯ ಅಲೆಯ ವಿರುದ್ಧ ಹೋರಾಟ, ಮತ್ತೊಂದೆಡೆ ಆಂತರಿಕ ಸಂರ್ಷವನ್ನು ಶಮನಗೊಳಿಸುವ ತಾಕಲಾಟ. ಕೆಲ ಬೆರಳೆಣಿಕೆ ಶಾಸಕರು ಮುಖ್ಯಮಂತ್ರಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರೆ, ಬಹುತೇಕ ಶಾಸಕರು "ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಬರುವುದಿಲ್ಲ' ಎಂದು ಸ್ಪಷ್ಟದನಿಯಲ್ಲಿ ಹೇಳಿದರು. ಆದರೂ, ಪದೇಪದೆ ಈ ವಿಷಯ ಚರ್ಚೆಗೆ ಬಂದಿದ್ದರಿಂದ ಖಡಕ್ ಆಗಿಯೇ ಉತ್ತರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ "ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡಲು ಸಿದ್ಧ' ಎಂದರು. ಅವರ ಈ ಹೇಳಿಕೆ ರಾಜಕೀಯ ಸಂಚಲನಕ್ಕೆ ಕಾರಣವಾಯಿತು. ಸಮಸ್ಯೆಯ ಗಂಭೀರತೆ ಬಿಜೆಪಿ ಕೇಂದ್ರ ನಾಯಕರು, ಅಹವಾಲು ಆಲಿಸಲು, ಸಮಸ್ಯೆ ಬಗೆಹರಿಸಲು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ರನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟರು. ಮೂರು ದಿನಗಳ ಭೇಟಿ ಅವಧಿಯಲ್ಲಿ ಅರುಣ್ ಸಿಂಗ್ ಮಂತ್ರಿಗಳು, ಶಾಸಕರ ಜತೆ ಚರ್ಚೆ ನಡೆಸಿ, ಅಸಮಾಧಾನ ತಗ್ಗಿಸಲು ಯತ್ನಿಸಿದ್ದಾರೆ. ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶವೂ ಈ ಮೂಲಕ ರವಾನೆಯಾಗಿದೆ.
ಸರ್ಕಾರದ ಆಂತರಿಕ ಕಲಹ, ಅಸಮಾಧಾನದ ಪರಿಣಾಮ ಆಡಳಿತಯಂತ್ರವೂ ಕುಸಿದಿದೆ. ಇನ್ನಾದರೂ, ಅಧಿಕಾರದ ಲೆಕ್ಕಾಚಾರವನ್ನು ಬದಿಗಿರಿಸಿ ಆಡಳಿತಯಂತ್ರವನ್ನು ಹಳಿಗೆ ತರಬೇಕಿದೆ. ಈ ನಿಟ್ಟಿನಲ್ಲಿ ಸಚಿವರು, ಶಾಸಕರು ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ರಾಜ್ಯದ ಮುಂದೆ ಹಲವು ಜ್ವಲಂತ ಸವಾಲುಗಳಿವೆ. ಕರೊನಾದ ಎರಡನೆಯ ಅಲೆ ಕೊಂಚ ತಗ್ಗಿದ್ದರೂ, ಮೂರನೆಯ ಅಲೆ ಬರುವ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕಿದ್ದು, ಕಳೆದ ಬಾರಿಯಂತೆ ಚಿಕಿತ್ಸೆಗೆ, ಹಾಸಿಗೆಗೆ ಹಾಹಾಕಾರ ಪಡುವಂಥ ಅಪಸವ್ಯ ಸೃಷ್ಟಿಯಾಗಬಾರದು. ಮುಂಗಾರು ಪ್ರವೇಶದ ಬೆನ್ನಲ್ಲೇ ಕೆಲ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ತಲೆದೋರಿದೆ. ಅಂಥ ಪ್ರದೇಶಗಳಲ್ಲಿ ನೆರೆ ಎದುರಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಕೃಷಿ ಚಟುವಟಿಕೆಗಳು ಇನ್ನಷ್ಟೇ ವೇಗ ಪಡೆಯಬೇಕಿದೆ. ರೈತರ ಆತ್ಮಸ್ಥೆ$ರ್ಯ ಕುಸಿಯದಂತೆ ಸರ್ಕಾರ ಅವರಿಗೆ ಬೆಂಬಲವಾಗಿ ನಿಲ್ಲಬೇಕಿದೆ. ಅನ್ಲಾಕ್ ಪ್ರಕ್ರಿಯೆಯ ಮುಂದಿನ ಹಂತ ಕೈಗೊಳ್ಳಬೇಕಿದ್ದು, ಆರ್ಥಿಕ ಚಟುವಟಿಕೆಗಳಿಗೆ ಮರುಜೀವ ತುಂಬಬೇಕಿದೆ. ಹೀಗೆ ಸಾಲು&ಸಾಲು ಸವಾಲುಗಳು ಇರುವಾಗ ಅವುಗಳಿಗೆ ಪರಿಹಾರ ಕಲ್ಪಿಸುವುದು ಜನಪ್ರತಿನಿಧಿಗಳ ಆದ್ಯತೆಯಾಗಬೇಕು. ಹೊರತು ಸಚಿವ ಸ್ಥಾನ ಸಿಗಲಿಲ್ಲ ಎಂಬ ಮುನಿಸಿಗೆ ಸರ್ಕಾರದ ವರ್ಚಸ್ಸನ್ನು ಹಾಳು ಮಾಡಲು ಯತ್ನಿಸುವುದು, ನಾಯಕತ್ವದ ಬಗ್ಗೆ ಅಪನಂಬಿಕೆ ಸೃಷ್ಟಿಸುವುದು ಸಲ್ಲ. ಇನ್ನಾದರೂ, ಅಭಿವೃದ್ಧಿ ಮಂತ್ರದೊಂದಿಗೆ ಆಡಳಿತಯಂತ್ರ ಪರಿಣಾಮಕಾರಿಯಾಗಿ ಕೆಲಸ ಮಾಡುವಂತಾಗಲಿ.