

ಬೈಲಕುಪ್ಪೆ: ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎರಡು ಕೊಠಡಿಗಳ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ವಸ್ತುಗಳನ್ನು ತೆಗೆದುಕೊಳ್ಳದೆ ಹಿಂದಿರುಗಿದ್ದಾರೆ.
ಪ್ರೌಢಶಾಲೆ ಆವರಣದಲ್ಲಿರುವ ಕೊಠಡಿಯ ಬೀಗವನ್ನು ಗುರುವಾರ ರಾತ್ರಿ ಕಬ್ಬಿಣದ ರಾಡಿನಿಂದ ಒಡೆದು ಒಳನುಗ್ಗಿರುವ ಕಳ್ಳರು, ಅಲ್ಲಿದ್ದ ಯಾವುದೇ ವಸ್ತುಗಳನ್ನು ಮುಟ್ಟದೆ ಮತ್ತೊಂದು ಕೊಠಡಿಯ ಬೀಗ ಮುರಿದು ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹೊರಟು ಹೋಗಿದ್ದಾರೆ.
ಶುಕ್ರವಾರ ಎಂದಿನಂತೆ ಶಿಕ್ಷಕರು ಕೊಠಡಿಯ ಬೀಗ ತೆಗೆಯಲು ಹೋದ ವೇಳೆ ಚಿಲಕ ಒಡೆದಿರುವುದನ್ನು ನೋಡಿ ಗಾಬರಿಗೊಂಡು ಮುಖ್ಯಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಬಳಿಕ ಈ ಸಂಬಂಧ ಬೈಲಕುಪ್ಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿ, ಅಪರಾಧ ಪಿಎಸ್‌ಐ ಮಹಾಲಿಂಗಯ್ಯ ಮತ್ತು ಸಿಬ್ಬಂದಿ ರವಿಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.