ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

08 HANUR 2
ಹನೂರಿನ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಇ-ಸ್ವತ್ತು ವಿವರ ತಿದ್ದುಪಡಿಯಾಗದ ಹಿನ್ನೆಲೆಯಲ್ಲಿ ಬೇಸತ್ತ ಸೊಪ್ಪಿನಕೇರಿಯ ಸುರೇಶ್ ಮೈ ಮೇಲೆ ಪೆಟ್ರೋಲ್ ಸುರಿದುಕೊಳ್ಳಲು ಮುಂದಾಗಿದ್ದರು.
Published on

ಹನೂರು: ಇ ಸ್ವತ್ತು ವಿವರದ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿ 2 ವರ್ಷ ಕಳೆದಿದ್ದರೂ ಕೆಲಸವಾಗದ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ ನಡೆಯಿತು.

ಪಟ್ಟಣದ ಸೊಪ್ಪಿನಕೇರಿ ಬೀದಿಯ ನಿವಾಸಿ ಸುರೇಶ್ ಆತ್ಮಹತ್ಯೆಗೆ ಮುಂದಾದವರು. ಇವರು ಇ ಸ್ವತ್ತು ನಮೂನೆಯನ್ನು ಪಡೆದುಕೊಂಡಿದ್ದು, ಇದರಲ್ಲಿ 3ನೇ ವಾರ್ಡಿನ ಬದಲಾಗಿ 13ನೇ ವಾರ್ಡ್ ಹಾಗೂ ಕುವೆಂಪುನಗರ ಬೀದಿ ಎಂದು ತಪ್ಪಾಗಿ ನಮೂದಾಗಿದೆ. ಈತ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಆಸ್ತಿಯನ್ನು ಮಾರಾಟ ಮುಂದಾಗಿದ್ದು, ವಿವರದ ತಿದ್ದುಪಡಿಗಾಗಿ ಅಗತ್ಯ ದಾಖಲೆಯೊಂದಿಗೆ ಪಪಂಗೆ ಅರ್ಜಿ ಸಲ್ಲಿಸಿ 2 ವರ್ಷವಾಗಿತ್ತು. ಆದರೆ ಯಾವುದೇ ಕ್ರಮವಾಗಿರಲಿಲ್ಲ. ಇದರಿಂದ ಬೇಸತ್ತ ಸುರೇಶ್ ಬೆಳಗ್ಗೆ ಪಪಂ ಕಚೇರಿಗೆ ಪೆಟ್ರೋಲ್‌ನೊಂದಿಗೆ ಆಗಮಿಸಿ ತಿದ್ದುಪಡಿಯಾಗದಿರುವ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಧಿಕಾರಿಗಳು ಬರುವುದನ್ನೇ ಕಾದು ಕುಳಿತಿದ್ದರು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪೆಟ್ರೋಲ್ ಸುರಿದುಕೊಳ್ಳದಂತೆ ಮನವಿ ಮಾಡಿದರು. ಆದರೆ ಇದಕ್ಕೊಪ್ಪದೇ ಪಟ್ಟುಹಿಡಿದ ಸುರೇಶ್ ಮೈಮೇಲೆ ಪೆಟ್ರೋಲ್ ಸುರಿದುಕೊಳ್ಳಲು ಮುಂದಾದರು. ಪೊಲೀಸರು ಹರಸಾಹಸಪಟ್ಟು ಕೈಯಲ್ಲಿ ಹಿಡಿದಿದ್ದ ಪೆಟ್ರೋಲ್ ಕ್ಯಾನ್‌ಅನ್ನು ಕಸಿದರು.

ಈ ವೇಳೆ ಮುಖ್ಯಾಧಿಕಾರಿ ಎಂ.ಪಿ ಮಹೇಶ್‌ಕುಮಾರ್ ಅವರು ಆಗಮಿಸಿ ಸಮಸ್ಯೆಯನ್ನು ಅರಿತರು. ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಕಾರ್ಯವೈಖರಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಅಗತ್ಯ ಕ್ರಮವಹಿಸಿ ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧವೇ ದೂರು ದಾಖಲಿಸಲಾಗುವುದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಬಳಿಕ ಕೆಲ ಹೊತ್ತಿನಲ್ಲೇ ಸಮಸ್ಯೆ ಬಗೆಹರಿಸಿ ಸುರೇಶ್ ಅವರಿಗೆ ನಮೂನೆಯನ್ನು ಸಮಸ್ಯೆಯನ್ನು ಬಗೆಹರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net