ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ದಾಳಿಗೆ ಯತ್ನ

Crime Logo
Published on

ಬೆಂಗಳೂರು: ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋ ಒಂದರಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದ್ದಾರೆ ಎನ್ನಲಾಗಿರುವ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಅವರ ಮನೆ ಮೇಲೆ ಮೊಟ್ಟೆ ದಾಳಿಗೆ ಯತ್ನಿಸಲಾಗಿದೆ.
ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಪೆನ್‌ಡ್ರೈವ್ ಪ್ರಕರಣ ಸಂಬಂಧ ಬಿಜೆಜೆ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಹಾಗೂ ಮಾಜಿ ಸಂಸದ ಶಿವರಾಮೇಗೌಡ ಅವರ ನಡುವಿನ ಆಡಿಯೋ ಸಂಭಾಷಣೆಯಲ್ಲಿ ದೇವೇಗೌಡರ ಬಗ್ಗೆ ಶಿವರಾಮೇಗೌಡ ಅವಹೇಳನಕಾರಿಯಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.
ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬನಗಿರಿಯಲ್ಲಿ ವಾಸವಿರುವ ಶಿವರಾಮೇಗೌಡ ಅವರ ಮನೆ ಬಳಿ ಭಾನುವಾರ ತಡರಾತ್ರಿ ೧೨.೩೦ ಕ್ಕೆ ಕಾರಿನ ನೋಂದಣಿ ಸಂಖ್ಯೆ ಕಾಣದಂತೆ ಬಟ್ಟೆಕಟ್ಟಿಕೊಂಡು ಬಂದಿದ್ದ ಗುಂಪೊಂದು ಮನೆ ಮೇಲೆ ಮೊಟ್ಟೆ ಎಸೆಯಲು ಯತ್ನಿಸಿದೆ. ಆದರೆ ಆ ವೇಳೆ ಪೊಲೀಸರನ್ನು ಕಂಡು ತಂದಿದ್ದ ೫-೬ ಮೊಟ್ಟೆಗಳನ್ನು ಅವರ ಕಣ್ತಪ್ಪಿಸಿ ಮನೆ ಮುಂದೆ ಎಸೆದು ಪರಾರಿಯಾಗಿದ್ದಾರೆ. ಮೊಟ್ಟೆ ಎಸೆಯಲು ಯತ್ನಿಸಿ ಪರಾರಿಯಾದವರಿಗಾಗಿ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಹುಡುಕಾಟ ನಡೆಸಿದ್ದಾರೆ. ಪೊಲೀಸರು ಶಿವರಾಮೇಗೌಡ ಮನೆಗೆ ಹೆಚ್ಚಿನ ಬಂದೋಬಸ್ತ್ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net