ಸಿಜೆಐ ಮೇಲೆ ದಾಳಿ ಯತ್ನ: ಅವನ ಹೆಸರು ರಾಕೇಶ್ ಆಗದೇ, ಅಸಾದ್ ಆಗಿದ್ರೆ: ದೆಹಲಿ ಪೊಲೀಸರ ವಿರುದ್ಧ ಓವೈಸಿ ವಾಗ್ದಾಳಿ|Asaduddin Owaisi

ವಿಜಯವಾಣಿ (4)
Published on

Asaduddin Owaisi: ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ವಿರುದ್ಧ ಶೂ ಎಸೆಯಲು ಯತ್ನಿಸಿದ ವೃದ್ದ ವಕೀಲ ರಾಕೇಶ್​ ಕಿಶೋರ್​​ ವಿರುದ್ಧ ಯಾವುದೇ ಕ್ರಮಕೈಗೊಳ್ಳದೇ ಬಿಟ್ಟಿದ್ದಕ್ಕೆ ದೆಹಲಿ ಪೊಲೀಸರ ನಡೆಯ ವಿರುದ್ಧ AIMIM ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಬುಧವಾರ(ಅ. 08) ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಹೈದರಾಬಾದ್​ನಲ್ಲಿ ಮಾತನಾಡಿರುವ ಅವರು, ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಲಿಲ್ಲ, ಯಾಕಂದರೆ ಅವನ ಹೆಸರು ರಾಕೇಶ್ ಕಿಶೋರ್. ಅದೇ ಅವನ ಹೆಸರು ಅಸಾದ್ ಆಗಿದ್ದರೆ ಅದೇ ಪೊಲೀಸರು ಏನು ಮಾಡುತ್ತಿದ್ದರು?, ಪರಿಸ್ಥಿತಿ ವಿಭಿನ್ನವಾಗಿರುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದ ಮುಖ್ಯ ನ್ಯಾಯಾಧೀಶರು ಜಾತಿಯಿಂದ ದಲಿತರು. ಓರ್ವ ಆರೋಪಿ ಸನಾತನ ಧರ್ಮದ ಅಪಮಾನ ಸಹಿಸಲ್ಲ ಎಂದು ನ್ಯಾಯಾಧೀಶರ ಮೇಲೆ ಶೂ ಎಸೆಯಲು ಯತ್ನಿಸುತ್ತಾನೆ. ಏನಾಗುತ್ತಿದೆ ದೇಶದಲ್ಲಿ?, ನ್ಯಾಯಾಧೀಶರ ಮೇಲೆಯೇ ಶೂ ಎಸೆಯುವ ಧೈರ್ಯ ಹೇಗೆ ಬಂತು? ಪೊಲೀಸರು ಯಾಕೆ ಯುಎಪಿಎ ಅಡಿ ಕೇಸ್ ದಾಖಲಿಸಿ ಕ್ರಮಕೈಗೊಳ್ಳಲಿಲ್ಲ. ಅದೇ ಆರೋಪಿ ಅಸಾದ್ ಆಗಿದ್ರೆ ಬಿಜೆಪಿ ಆರೋಪಿಯನ್ನು ಪಾಕಿಸ್ತಾನಕ್ಕೆ ಲಿಂಕ್ ಮಾಡುತ್ತಿತ್ತು ಕಿಡಿಕಾರಿದ್ದಾರೆ.

ಇತ್ತೀಚೆಗೆ ನ್ಯಾಯಾಲಯದಲ್ಲಿ ಮಸೀದಿಗಳಿಗೆ ಸಂಬಂಧಿದ ವ್ಯತಿರಿಕ್ತ ತೀರ್ಪುಗಳು ಬಂದವು. ಆದರೆ ನಮ್ಮವರು ಯಾರೂ ಶೂ ಎತ್ತಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್​ನಲ್ಲಿ ನಡೆದಿದ್ದೇನು?

ಸೋಮವಾರ(ಅ. 06) ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಜೆಐ ಗವಾಯಿ ನೇತೃತ್ವದ ಪೀಠದ ಮುಂದೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ, ವಕೀಲ ರಾಕೇಶ್ ಕಿಶೋರ್ ತಮ್ಮ ಶೂ ತೆಗೆದು ಸನಾತನ ಕಾ ಅಪ್ಮಾನ್ ನಹಿ ಸಹೇಂಗೆ (ಸನಾತನ ಧರ್ಮದ ಅವಮಾನವನ್ನು ನಾವು ಸಹಿಸುವುದಿಲ್ಲ) ಎಂದು ಕೂಗುತ್ತಾ ಅದನ್ನು ಎಸೆಯಲು ಪ್ರಯತ್ನಿಸಿದನು.

ತಕ್ಷಣ ಕೋರ್ಟ್​ನ ಭದ್ರತಾ ಸಿಬ್ಬಂದಿ ಆರೋಪಿ ವಕೀಲನನ್ನು ಹಿಡಿದು ಕೋರ್ಟ್​ನಿಂದ ಆಚೆ ಹಾಕಿತು. ಹಾಗೆಯೇ ಪೊಲೀಸರಿಗೆ ಒಪ್ಪಿಸಿದರು. ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಜೆಐ ಬಿ.ಆರ್.ಗವಾಯಿ ಇಂತಹ ಘಟನೆಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net