ಟ್ರಾಫಿಕ್ ಸಿಗ್ನಲ್ ಬ್ಯಾಟರಿ ಕಳ್ಳತನಕ್ಕೆ ಯತ್ನ; ಸಿನಿಮೀಯ ಶೈಲಿಯಲ್ಲಿ ಕಳ್ಳನ ಹಿಡಿದ ಸಂಚಾರ ಪೊಲೀಸ್

police
Published on

ಬೆಂಗಳೂರು: ಟ್ರಾಫಿಕ್ ಸಿಗ್ನಲ್‌ಗಳ ಬ್ಯಾಟರಿ ಕಳವು ಮಾಡುತ್ತಿದ್ದ ಖದೀಮನನ್ನು ಮೈಕೋ ಲೇಔಟ್ ಸಂಚಾರ ಠಾಣೆ ಕಾನ್‌ಸ್ಟೆಬಲ್ ಬೆನ್ನಹತ್ತಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ.

ಸದ್ದುಗುಂಟೆಪಾಳ್ಯದ ನಿವಾಸಿ ಶಂಶುದ್ದೀನ್ ಬಂಧಿತ. ಬನ್ನೇರುಘಟ್ಟ ರಸ್ತೆಯ ವಿಜಯಾ ಬ್ಯಾಂಕ್ ಲೇಔಟ್ ಸಮೀಪ ‘ನಮನ ಜಂಕ್ಷನ್’ನಲ್ಲಿ ಮಂಗಳವಾರ ಬ್ಯಾಟರಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಅಲ್ಲೇ ಕರ್ತವ್ಯದಲ್ಲಿದ್ದ ಮೈಕೋ ಲೇಔಟ್ ಸಂಚಾರ ಠಾಣೆ ಕಾನ್‌ಸ್ಟೆಬಲ್ ಅರ್ಜುನ್, ಆರೋಪಿ ಬೆನ್ನಹಟ್ಟಿ ಬಂಧಿಸಿದ್ದಾರೆ. ಮೈಕೋ ಲೇಔಟ್ ಠಾಣೆ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಬ್ಯಾಟರಿ ಕಳ್ಳನನ್ನು ಸೆರೆ ಹಿಡಿದ ಅರ್ಜುನ್ ಕಾರ್ಯವೈಖರಿಯನ್ನು ಶ್ಲಾಘಿಸಿ ಪ್ರಶಂಸನಾ ಪತ್ರ ನೀಡಿ ಜಂಟಿ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ಬುಧವಾರ ಅಭಿನಂದಿಸಿದ್ದಾರೆ.

ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಸಿಗ್ನಲ್‌ಗಳ ಬ್ಯಾಟರಿಗಳನ್ನು ಕೆಲವು ಕಿಡಿಗೇಡಿ ಕಳವು ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಿಗ್ನಲ್‌ಗಳ ಬ್ಯಾಟರಿಗಳ ಮೇಲೆ ಪೊಲೀಸರು ನಿಗಾವಹಿಸಿದ್ದರು. ವಿಜಯಾ ಬ್ಯಾಂಕ್ ಲೇಔಟ್‌ನ ನಮನ ಜಂಕ್ಷನ್ ಬಳಿ ಮಂಗಳವಾರ ಮಧ್ಯಾಹ್ನ 11 ಗಂಟೆಯಲ್ಲಿ ಶಂಶುದ್ದೀನ್ ಬ್ಯಾಟರಿ ಕಳ್ಳತನಕ್ಕೆ ಯತ್ನಿಸಿದ್ದಾಗ ಸೆರೆಸಿಕ್ಕಿದ್ದಾನೆ. ಇದಕ್ಕೂ ಮೊದಲು ಆರೋಪಿ ಬನ್ನೇರುಘಟ್ಟ ರಸ್ತೆ ರುಬಿ ಜಂಕ್ಷನ್‌ನಲ್ಲಿ ಸಹ ಬ್ಯಾಟರಿ ಕಳ್ಳತನಕ್ಕೆ ಯತ್ನಿಸಿದ್ದ. ಅಲ್ಲಿ ಪೊಲೀಸರನ್ನು ಕಂಡು ತಪ್ಪಿಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net