ತಿಪಟೂರಲ್ಲಿ ಎರಡು ತಲೆ ಹಾವು ಮಾರಾಟಕ್ಕೆ ಯತ್ನ: ಪಿಡಿಒ ಸೇರಿ ಮೂವರ ಬಂಧನ

2 head snake
Published on

ತಿಪಟೂರು: ತುಮಕೂರು ಜಿಲ್ಲೆ ತಿಪಟೂರು ನಗರದ ಹುಳಿಯಾರು ರಸ್ತೆಯ ಪಕ್ಕದಲ್ಲಿರುವ ಮಂಜುನಾಥ್ ನಗರದಲ್ಲಿ ಎರಡು ತಲೆ ಹಾವು ಮಾರಾಟಕ್ಕೆ ಯತ್ನಿಸಿದ ಪಿಡಿಒ ಸೇರಿ ಮೂವರನ್ನು ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಜನರಲ್ಲಿನ ಮೂಢನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡ ಆರೋಪಿಗಳು, ಎರಡು ತಲೆ ಹಾವಿನಿಂದ ಐಶ್ವರ್ಯ ವೃದ್ಧಿಸುತ್ತದೆ. ಈ ಹಾವು ಕೋಟ್ಯಂತರ ಬೆಲೆ ಬಾಳುತ್ತದೆ ಎಂದು ಸುಳ್ಳು ಹೇಳಿ ಜನರನ್ನು ವಂಚಿಸಲು ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಮೂವರನ್ನೂ ಬಂಧಿಸಿ, ಹಾವನ್ನು ವಶಕ್ಕೆ ಪಡೆದಿದ್ದಾರೆ.

ನಾಗರಘಟ್ಟ ಗ್ರಾಮ ಪಂಚಾಯಿತಿ ಪಿಡಿಒ ಕಾಂತರಾಜು ಹಾಗೂ ಸಹಚರರಾದ ಚಿಕ್ಕನಾಯಕನಹಳ್ಳಿ ತಾಲೂಕಿನ ಯಗಚೀಹಳ್ಳಿ ಗ್ರಾಮದ ಶೇಕ್​ ಹುಸೇನ್​, ಮೊಹ್ಮದ್​ ಆರೀಫ್​ ಎಂಬುವವರನ್ನು ಸೋಮವಾರ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಬೈಕ್​ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎಸಿಎಫ್​ ಸುಬ್ಬರಾವ್​ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್​ಎಫ್​ಒ ಜಗದೀಶ್​, ಡಿಆರ್​ಎಫ್​ಒ ಶಿವಕುಮಾರ್​, ಸಿಬ್ಬಂದಿ ತೇಜಸ್​ ಕುಮಾರ್​, ಚೌಡಪ್ಪ, ಚಾಲಕ ಮಂಜುನಾಥ್​, ಅರುಣ್​ ಕುಮಾರ್​, ದಿವಾಕರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net