ಪಥ ಸಂಚಲನಕ್ಕೆ ಅಡೆತಡೆ ಯತ್ನ: ಡಾ.ಅಶ್ವತ್ಥ ನಾರಾಯಣ | Misusing power

Ashwath narayana
Published on

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನಕ್ಕೆ ಒಂದೆಡೆ ಅಡತಡೆಗೆ ಪ್ರಯತ್ನ, ಮತ್ತೊಂದೆಡೆ ಪಥ ಸಂಚಲನದಲ್ಲಿ ಭಾಗಿಯಾಗಿದ್ದಾರೆ ಎಂದು ಸರ್ಕಾರಿ ಅಧಿಕಾರಿ,‌ನೌಕರರನ್ನು ಅಮಾನತು ಮಾಡಲಾಗುತ್ತಿದೆ. ಈ ರೀತಿ ಮಾಡಲು ಸರ್ಕಾರದ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ ಒತ್ತಡ ಹೇರುತ್ತಿದ್ದಾರೆ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಆರೋಪಿಸಿದರು.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಚಿತ್ತಾಪುರದಲ್ಲಿ ಉದ್ದೇಶಪೂರ್ವಕವಾಗಿ ಅಡಚಣೆ ಮಾಡುತ್ತಿದ್ದಾರೆ. ಅಕ್ಟೋಬರ್ 19 ರ ಪಥ ಸಂಚಲನಕ್ಕೂ ಚಿತ್ತಾಪುರದಲ್ಲಿ ಅಡ್ಡಿ ಮಾಡಿದ್ದರು. ಈಗ ನವೆಂಬರ್ 2 ರಂದೂ ಅಡಚಣೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ವಾಗ್ದಾಳಿ ಮಾಡಿದರು.

ಸರ್ಕಾರದ ಅಧಿಕಾರ ದುರ್ಬಳಕೆಗೆ ತೆರೆ ಬೀಳುವ ಕಾಲ ಬರುತ್ತದೆ. ಆರ್‌ಎಸ್‌ಎಸ್ ನೊಂದಣಿಯಾಗಿಲ್ಲವೆಂದು ಪದೇ ಪದೆ ಹೇಳುತ್ತಿದ್ದಾರೆ. ಪ್ರತಿಯೊಂದು ಸಂಸ್ಥೆಯೂ ನೊಂದಣಿ ಆಗುವ ಅಗತ್ಯ ಇಲ್ಲ. ಪ್ರಿಯಾಂಕ್ ಖರ್ಗೆ ಎಲ್ಲಿದ್ದಾರೋ, ಏನು ತಿಳ್ಕೊಂಡಿದ್ದಾರೋ? ಗೊತ್ತಿಲ್ಲ ಎಂದು  ಕಿಡಿಕಾರಿದರು.

ಪಥ ಸಂಚಲನ ಮಾಡಲು ಎಲ್ಲರಿಗೂ ಹಕ್ಕಿದೆ. ಕಾಂಗ್ರೆಸ್ ನ ಹಲವರು ಹಿಂದೆ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಅಷ್ಟೇ ಏಕೆ ಸದನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆರ್ ಎಸ್ ಎಸ್ ಪ್ರಾರ್ಥನೆ ಗೀತೆಯನ್ನು ಹಾಡಿದ್ದರು. ಸಂಘದ ಪಥ ಸಂಚಲನದಿಂದ ಕಾನೂನು-ಸುವ್ಯವಸ್ಥೆಗೆ ಎಳ್ಳಷ್ಟು ಅಡ್ಡಿಯಾಗಿಲ್ಲ. ಇದನ್ನು ಅರ್ಥ ಮಾಡಿಕೊಂಡು ಪಥ ಸಂಚಲನಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಆಗ್ರಹಿಸಿದರು.

ಎಲ್ಲಿದೆ ಆಸ್ತಿ ?

ಸಂಘ ನೋಂದಣಿ ಆಗದಿದ್ದರೂ ಕಟ್ಟಡ ಹೇಗೆ ಕಟ್ಟಿದ್ದಾರೆ ?. ಟ್ಯಾಕ್ಸ್ ಲೆಕ್ಕ ಕೊಟ್ಟಿಲ್ಲ ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ. ಆರ್‌ಎಸ್‌ಎಸ್ ಹೆಸರಲ್ಲಿ ಯಾವ ಕಟ್ಟಡ ಇದೆ ಅಂತ ಹುಡುಕಿ ಹೇಳಲಿ. ಸಂಘ ಅನ್ನೋದು ಸ್ವಯಂ ಸೇವಕ ಸಂಸ್ಥೆ, ದೇಶಭಕ್ತ ಸಂಸ್ಥೆ. ಅದರ ಹೆಸರಲ್ಲಿ ಯಾವುದೇ ಕಟ್ಟಡ ಇಲ್ಲ, ಪ್ರಿಯಾಂಕ್ ಖರ್ಗೆಯವರು ಆಗರ್ಭ ಶ್ರೀಮಂತ ಇರಬಹುದು, ಅವರ ಬೆನ್ನು ಅವರು ನೋಡಿಕೊಳ್ಳಲಿ ಎಂದು ಕುಟುಕಿದರು.

ಸಾಮಾಜಿಕ ಜಾಲ ತಾಣದಲ್ಲಿ ಯಡಿಯೂರಪ್ಪ ಹಾಗೂ ಅನಂತಕುಮಾರ ಸಂಭಾಷಣೆಯ ವಿಡಿಯೋವೊಂದನ್ನು ಸಚಿವ ಪ್ರಿಯಾಂಕ್ ಖರ್ಗೆ ಹಂಚಿಕೊಂಡಿದ್ದಾರೆ. ಆದರೆ ಸಂಭಾಷಣೆಯ ಪೂರ್ವಾಪರ ತಿಳಿಯದೆ ಎಡವಟ್ಟು ಮಾಡಿಕೊಂಡಿದ್ದಾರೆ.

ಯಡಿಯೂರಪ್ಪ-ಅನಂತ್ ಕುಮಾರ್ ಅವರು ಅವತ್ತು ಕಾಂಗ್ರೆಸ್ ಪಕ್ಷದ ನಾಯಕರು ಅವರ ಹೈಕಮಾಂಡ್ ಗೆ ಕೊಟ್ಟ ಕಪ್ಪ ಕಾಣಿಕೆ ಬಗ್ಗೆ ಮಾತಾಡಿದ್ದಾರೆ. ತಮ್ಮ ಹುಳುಕು ಮುಚ್ಚಿಕೊಳ್ಳಲು ಪ್ರಿಯಾಂಕ್ ಖರ್ಗೆ ಮುಂದಾಗಿದ್ದಾರೆ. ಅವರ ಪಕ್ಷ ಉಗ್ರಪ್ಪ - ಸಲೀಂ ಮಾತಾಡಿರೋ ಸಂಭಾಷಣೆ ಬಗ್ಗೆ ಮಾತಾಡಲಿ ಎಂದು ಕಾಲೆಳೆದರು.

ಸರ್ಕಾರದ ವಿರುದ್ಧ ಆಕ್ಷೇಪ

ರಾಜ್ಯದ ಜನರ ಮೇಲೆ ಅನೇಕ ತೆರಿಗೆಗಳ ಭಾರ ಹೊರಿಸಿದರೂ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ರೈತರ ಕಷ್ಟ ನಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬೆಂಗಳೂರಿನ ದುರವಸ್ಥೆ ಬಗ್ಗೆ ಉದ್ಯಮಿಗಳು ಆಕ್ಷೇಪ ಎತ್ತಿದ್ದಾರೆ. ವಿಷಯಾಂತರ ಮಾಡುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ವಿರೋಧಿ ಎಂದಿದ್ದಾರೆ.

ಎಲ್ಲ ರಾಜ್ಯಗಳು, ದೇಶದ 140 ಕೋಟಿ ಜನರ ಏಳ್ಗೆಯನ್ನು ಮೋದಿ ಬಯಸುತ್ತಿದ್ದಾರೆ. ಮೋದಿಗೆ ಇರುವ ಒಂದು ಪರ್ಸೆಂಟ್ ಕ್ರೆಡಿಬಿಲಿಟಿ ಸಿದ್ದರಾಮಯ್ಯ ಅವರಿಗೆ ಇದೆಯೆ ? ಮೋದಿ ಎಂದರೆ ದೇಶದ ಭರವಸೆ, ಮೋದಿ ಎಂದರೆ ನಂಬಿಕೆ, ಅವರನ್ನು ನೋಡಿಯೇ ಜನ ಮತ ಹಾಕುತ್ತಾರೆ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾಯಾರಣ ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net