

ಬೆಂಗಳೂರು: ನನ್ನ ವರ್ಚಸ್ಸು ಕುಗ್ಗಿಸಲು, ಬಿಜೆಪಿ ಹೈಕಮಾಂಡ್ ಜತೆ ಇರುವ ಸಂಬಂಧಕ್ಕೆ ಹುಳಿ ಹಿಂಡಲು ಕೆಲವು ಬಿಜೆಪಿ ನಾಯಕರು ಕಾಂಗ್ರೆಸ್ ಜತೆ ಕೈಜೋಡಿಸಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಮುಗಿಸಬೇಕು ಎಂದು ಈ ರೀತಿಯ ಬೆಳವಣಿಗೆ ಆರಂಭಿಸಿದ್ದಾರೆ. ಬಿಜೆಪಿಯಲ್ಲಿ ಇರುವ ಕೆಲವರೂ ಕುಮಾರಸ್ವಾಮಿ ದೆಹಲಿ ಮಟ್ಟದಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದಾನೆ. ಅದಕ್ಕೆ ಸಮಸ್ಯೆ ಉದ್ಭವ ಮಾಡಲು ಇಂತಹ ಸಂದರ್ಭ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿರಬಹುದು ಎಂದು ಗುಮಾನಿ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಹೆಸರು ಹಾಳುಮಾಡಬೇಕು. ಬಿಜೆಪಿ ಹೈಕಮಾಂಡ್ ಜತೆ ಇರುವ ಸಂಬಂಧಕ್ಕೆ ಹುಳಿಹಿಂಡಲು ಕೆಲವರಿದ್ದಾರೆ. ಅದಕ್ಕೆ ನಾನು ಯಾಕೆ ಬಲಿಯಾಗಬೇಕು? ನಮ್ಮ ಪಕ್ಷದಲ್ಲಿ ಅಂತಹವರು ಇಲ್ಲ. ಬಿಜೆಪಿಯಲ್ಲಿ ಕೆಲವರು ಕಾಂಗ್ರೆಸ್ ನಾಯಕರ ಜತೆ ಸೇರಿಕೊಂಡಿದ್ದಾರೆ. ಅದು ನನಗೆ ಗೊತ್ತಿದೆ. ಪ್ರಧಾನಿ ಹೆಸರು ಹಾಳು ಮಾಡಲು ನೋಡುತ್ತಿದ್ದಾರೆ. ಅದಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಮೋದಿ ವರ್ಚಸ್ಸಿಗೆ ಧಕ್ಕೆ ಆಗಬಾರದು, ಸೀಟುಗೆಲ್ಲಬೇಕು. ಕಾಂಗ್ರೆಸ್ ಹುನ್ನಾರಕ್ಕೆ ಬಿಜೆಪಿಯವರು ಬಲಿಯಾಗಬಾರದು ಎಂದು ಮಾರ್ಮಿಕವಾಗಿ ಹೇಳಿದರು.
ಸಿ.ಪಿ.ಯೋಗೇಶ್ವರ್ ಮೇಲಿದ್ದಾರೆ, ದೊಡ್ಡವರು. ಅವರ ಬಗ್ಗೆ ಏನು ಚರ್ಚೆ ಮಾಡಲಿ. ಅವರು ಏನು ಮಾಡುತ್ತಾರೊ ಗೊತ್ತಿಲ್ಲ. ಕಾಂಗ್ರೆಸ್, ಬೇರೆ ಪಕ್ಷದ ಲೀಡರ್ ಜತೆ ಚರ್ಚೆಯಲ್ಲಿದ್ದಾರೆ ಎಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಎಲ್ಲದರಲ್ಲೂ ಓಪನ್ ಇಟ್ಟುಕೊಂಡಿದ್ದಾರೆ. ಪಕ್ಷೇತರ ಎನ್ನುತ್ತಾರೆ. ನನ್ನ ಜತೆ ಆ ಬಗ್ಗೆ ಚರ್ಚೆ ಮಾಡಿಲ್ಲ. ಕೆಲವು ವಿಷಯಗಳಲ್ಲಿ ಡಿಸಿಎಂ ಎರಡು ಮೂರು ಬಾರಿ ಭೇಟಿ ಮಾಡಿದ್ದಾರೆ. ಮದ್ದೂರು ಶಾಸಕರನ್ನೂ ಭೇಟಿ ಮಾಡಿರುವ ಸುದ್ದಿ ಇದೆ ಎಂದು ಕುಮಾರಸ್ವಾಮಿ ಟಾಂಗ್ ಕೊಟ್ಟರು.
ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ನಾನು ಸ್ಪರ್ಧಿಸುವುದಿಲ್ಲ ಎಂದು ನೂರು ಬಾರಿ ಹೇಳಿದ್ದಾರೆ. ಇನ್ನೂ ಮೂರು ವರ್ಷ ಕಾಯುತ್ತೇನೆ ಎಂದಿದ್ದಾರೆ. ಹೀಗಾಗಿ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸಬೇಕೆಂಬುದು ನಮ್ಮ ಉದ್ದೇಶ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಾನೇನಾದರೂ ನಿಖಿಲ್ ನಿಲ್ಲುತ್ತಾನೆ ಎಂದು ಹೇಳಿದ್ದೀನಾ? ಎನ್‌ಡಿಎ ಅಭ್ಯರ್ಥಿ ನಿಲ್ಲುತ್ತಾರೆ. ಜೆಡಿಎಸ್ ಅಥವಾ ಬಿಜೆಪಿಯವರು ಆಗಬಹುದು ಎಂದು ಹೇಳಿದ್ದೇನೆ. ನಾವೇನು ಪಲಾಯನ ಮಾಡಲು ಆಗುತ್ತದೆಯೆ? ಎಂದು ಪ್ರಶ್ನಿಸಿದರು.
ದೇವೇಗೌಡರನ್ನು ಭೇಟಿಯಾಗಿ ಒಂದು ವಾರವಾಗಿತ್ತು. ಆರೋಗ್ಯ ವಿಚಾರಿಸಲು ಭೇಟಿ ಮಾಡಿದ್ದೇನೆ. ದೇವೇಗೌಡರು ಚನ್ನಪಟ್ಟಣ ಟಿಕೆಟ್ ವಿಚಾರ ಕುರಿತು ತೀರ್ಮಾನ ಕೈಗೊಳ್ಳುವುದಿಲ್ಲ. ನನಗೆ ಬಿಡುತ್ತಾರೆ. ನಾನು ಪಕ್ಷದ ಮುಖಂಡರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
"ಯಾವುದೇ ಕಾರಣಕ್ಕೂ ಕಾಂಗ್ರೆಸ್ ಲಾಭ ಪಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಅಲ್ಲಿ ಬಲಿಷ್ಠವಾಗಿಲ್ಲ. ಅವರ ಕಾರ್ಯಕರ್ತರು ಅಲ್ಲಿಲ್ಲ. ಹಣ, ಅಧಿಕಾರ ಬಲದಿಂದ ರಾಜಕೀಯ ಮಾಡಬೇಕಷ್ಟೆ. 25 ವರ್ಷದಿಂದ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಈಗ ಕೆಲವರು ಕಾಂಗ್ರೆಸ್ ಕುತಂತ್ರಕ್ಕೆ ಬಲಿಯಾಗಲು ಹೊರಟಿದ್ದಾರೆ. ಕಾಂಗ್ರೆಸ್‌ನವರ ಮಾತಿಗೆ ಮರುಳಾಗಬೇಡಿ'.
-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ.