ಡಿಎಸ್ಸಿ ಕೀ ಬಳಸಿ 3 ಕೋಟಿ ವಂಚನೆಗೆ ಯತ್ನ

fakereport
Published on

ಬೆಂಗಳೂರು: ರಾಜೀವ್ ಗಾಂಧಿ ವಸತಿ ನಿಗಮದ ಉಪ ನಿರ್ದೇಶಕರ ಡಿಎಸ್‌ಸಿ (ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್) ಕೀ ದುರ್ಬಳಕ್ಕೆ ಮಾಡಿಕೊಂಡು 159 ಲಾನುಭವಿಗಳಿಗೆ 3 ಕೋಟಿ ರೂ. ಮಂಜೂರು ಮಾಡಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಕುರಿತು ಮಲ್ಲೇಶ್ವರದ ನವವಿಕಾಸ ಕಟ್ಟಡ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕಿ ಕೆ. ವೃಂದಾ, ಸದಾಶಿವನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಸತಿ ಕಾರ್ಯಾಗಾರ ಯೋಜನೆಯಡಿ ಲಾನುಭವಿಗಳ ಪಟ್ಟಿಗೆ ಅನುಮೋದನೆಗೆ ಮ್ಯಾಪಿಂಗ್ ಮಾಡುವ ಅನುಷ್ಠಾನದ ಉಸ್ತುವಾರಿಯನ್ನು ಕೆ. ವೃಂದಾಗೆ ವಹಿಸಲಾಗಿತ್ತು. ಹೊಸ ಡಿಎಸ್‌ಪಿ ಕೀ ಪಡೆಯಲು 2024ರ ಸೆಪ್ಟೆಂಬರ್ 26ರಂದು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪತ್ರ ಬರೆದಿದ್ದರು. ಅದಕ್ಕೆ ಹೊಸದಾಗಿ ಡಿಎಸ್‌ಸಿ ಕೀ ಪಡೆಯಬೇಕೆಂದು ಗೊತ್ತಾಗಿ ಆಧಾರ್ ಮತ್ತು ಪಾನ್ ಕಾರ್ಡ್ ನಕಲನ್ನು ಕೊಟ್ಟು ನಿಗದಿತ ಶುಲ್ಕ ಪಾವತಿಗೆ ಇಲಾಖೆಗೆ ಪತ್ರ ಬರೆದಿದ್ದರು.

ಅಷ್ಟರಲ್ಲಿ ಡಿಎಸ್‌ಸಿ ಕೀ ದುರ್ಬಳಕ್ಕೆ ಮಾಡಿಕೊಂಡ ಕಿಡಿಗೇಡಿಗಳು ಬೇರೆ ಕಂಪ್ಯೂಟರ್‌ನಲ್ಲಿ ಇಲಾಖೆಯ ಯುಸರ್ ಐಡಿ ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ ಯೋಜನೆಯ ಲಾನುಭವಿಗಳ ಪಟ್ಟಿಗೆ ಅನುಮೋದನೆ ಮಾಡಿದ್ದರು. ಕಲಬುರಗಿ ಜಿಲ್ಲೆಯ 83, ಯಾದಗಿರಿ ಜಿಲ್ಲೆಯ 75 ಮತ್ತು ಬೆಳಗಾವಿಯ 1 ಒಟ್ಟಾರೆ 159 ಲಾನುಭವಿಗಳನ್ನು ರಾಜೀವ್ ಗಾಂಧಿ ವಸತಿ ನಿಗಮದ ಪೋರ್ಟಾಲ್‌ನಲ್ಲಿ ಅನುಮೋದನೆ ಮಾಡಿದ್ದರು.

ಇದರ ಮೊತ್ತ 3 ಕೋಟಿ ರೂ. ಮಂಜೂರು ಆಗುವಷ್ಟರಲ್ಲಿ ಎಚ್ಚೆತ್ತುಕೊಳ್ಳಲಾಗಿದೆ. ಇಲ್ಲವಾದರೆ, ಯಾವುದೇ ಪರಿಶೀಲನೆ ನಡೆಸದೆ ಏಕಾಏಕಿ 3 ಕೋಟಿ ರೂ. ಅನ್ನು ಮಂಜೂರು ಮಾಡುವ ಕುತಂತ್ರ ನಡೆದಿತ್ತು. ಡಿಎಸ್‌ಸಿ ಕೀ ದುರ್ಬಳಕ್ಕೆ ಮಾಡಿಕೊಂಡ ಆರೋಪಿಗಳ ಪತ್ತೆಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net