ಅಗ್ನಿವೀರ್ ಹುದ್ದೆ ಹೆಸರಲ್ಲಿ ವಂಚನೆಗೆ ಯತ್ನ |Agniveer post

₹2 ಲಕ್ಷ ಕೊಟ್ಟರೆ ಕೆಲಸ ಎಂದು ನಂಬಿಸಿದ್ದ ಇಬ್ಬರ ಸೆರೆ, ಮಿಲಿಟರಿ ಅಧಿಕಾರಿಗಳ ಸೋಗಿನಲ್ಲಿ ಮೋಸ.
accused
accused
Published on: 

ಬೆಂಗಳೂರು: ಮಿಲಿಟರಿಯಲ್ಲಿ ಅಗ್ನಿವೀರ್ ಹುದ್ದೆಗಳನ್ನು ಕೊಡಿಸುವ ಹೆಸರಲ್ಲಿ ಯುವಕರನಿಂದ ಲಕ್ಷಾಂತರ ರೂ. ಪಡೆದು ವಂಚಿಸುವ ಜಾಲ ರಾಜ್ಯದಲ್ಲಿ ಸಕ್ರಿಯವಾಗಿರುವ ವಿಚಾರ ಬೆಳಕಿಗೆ ಬಂದಿದೆ. ‘ನಾವು ಮಿಲಿಟರಿ ಮಾಜಿ ಅಧಿಕಾರಿಗಳು, ನಮ್ಮ ಪ್ರಭಾವದಿಂದ ಸೇನೆಯಲ್ಲಿ ಸಿಪಾಯಿ ಹುದ್ದೆ ಕೊಡಿಸುತ್ತೇವೆಂದು’ ಯುವಕರಿಗೆ ವಂಚಿಸಲು ಯತ್ನಿಸಿದ್ದ ಇಬ್ಬರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಬೆಳಗಾವಿ ನಿವಾಸಿಗಳಾದ ಧಾಕಲು ಭೀಮರಾಮ ಲಕ್ಕೆಬೈಲ್ಕರ್ ಮತ್ತು ವೀರಣ್ಣ ನಿಚ್ಚೆಣ್ಣಿ ಬಂಧಿತರು. ಇವರಿಬ್ಬರು 9 ಅಗ್ನಿವೀರ್ ಆಕಾಂಕ್ಷಿಗಳಿಗೆ ವಂಚಿಸಲು ಯತ್ನಿಸಿದ್ದರಿಂದ ಬಾಗಲಕೋಟೆ ಜಿಲ್ಲೆಯ ಬಿಳಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು, ಸೆ.10ರಿಂದ 23ರವರೆಗೆ ಒಟ್ಟು 9 ಅಭ್ಯರ್ಥಿಗಳನ್ನು ವಿಜಯಪುರಕ್ಕೆ ಕರೆಸಿಕೊಂಡು ತಮ್ಮ ಬಗ್ಗೆ ಸುಳ್ಳು ಪರಿಚಯ ಮಾಡಿಕೊಂಡು, ಸೇನೆಯಲ್ಲಿ ಗ್ಯಾರಂಟಿ ಕೆಲಸ ಕೊಡಿಸುತ್ತೇನೆ. ಆದರೆ, ದುಡ್ಡು ಖರ್ಚು ಆಗಲಿದೆ ಎಂದು ಯುವಕರನ್ನು ಪುಸಲಾಯಿಸಿದ್ದರು.

ಮೊದಲ ಹಂತದಲ್ಲಿ 50 ಸಾವಿರ ರೂ. ಕೊಡಬೇಕು. ಈ ಹಣದಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿ ಅದರಲ್ಲಿ ಪಾಸ್ ಮಾಡಿಸುತ್ತೇವೆ. ಬಳಿಕ ಆದೇಶ ಪತ್ರ ಬರಲಿದೆ. ಅದು ಬಂದ ಬಳಿಕ 2 ಲಕ್ಷ ರೂ. ನೀಡಬೇಕು ಎಂದು ಹೇಳಿದ್ದರು. ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಕನಸು ಕಂಡಿದ್ದ ಯುವಕರು, ವಂಚಕರ ಬಣ್ಣದ ಮಾತಿಗೆ ಮರುಳಾಗಿ, ಅವರ ಬೇಡಿಕೆಗೆ ಒಪ್ಪಿದ್ದರು. ಆಗ ಕೂಡಲೇ 50 ಸಾವಿರ ರೂ. ಮತ್ತು ಶಾಲಾ ದಾಖಲಾತಿಗಳನ್ನು ನೀಡಬೇಕು ಎಂದಿದ್ದರು. ಆಗ ಯುವಕರು ಹಣ ತಂದಿಲ್ಲ. ಮುಂದಿನ ದಿನಗಳಲ್ಲಿ ಹಣ ನೀಡುತ್ತೇವೆ ಎಂದು ದಾಖಲಾತಿ ಕೊಟ್ಟು ಊರಿಗೆ ತೆರಳಿದ್ದರು.

ಪೊಲೀಸರು ಸೆ.23ರಂದು ಯುವಕರಿಗೆ ಪೋನ್ ಕರೆ ಮಾಡಿದ್ದರು. ‘ನಿಮಗೆ ಸೇನೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿದ ವ್ಯಕ್ತಿಗಳು ನಕಲಿ ಮಿಲಿಟರಿ ಅಧಿಕಾರಿ’. ಇವರು ನಿಮ್ಮನ್ನು ವಂಚಿಸಲು ಯತ್ನಿಸಿದ್ದು, ಅವರನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದರು. ಆಗ ಯುವಕರೆಲ್ಲರೂ ಠಾಣೆಗೆ ಬಂದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರಿಂದ ತನಿಖೆ ಮುಂದುವರಿದಿದೆ.

ಸೇನಾ ನೇಮಕಾತಿ ಪಾರದರ್ಶಕ

ಸೇನೆಯಲ್ಲಿ ಉದ್ಯೋಗ ಕೊಡಿಸುತ್ತೇವೆ ಎನ್ನುವ ವ್ಯಕ್ತಿಗಳ ಮಾತನ್ನು ನಂಬಬೇಡಿ. ಅವೆಲ್ಲ ಸುಳ್ಳು, ಅವರೆಲ್ಲ ವಂಚಿಸುವ ದುಷ್ಕರ್ಮಿಗಳಾಗಿದ್ದಾರೆ. ಸೇನೆಯ ನೇಮಕಾತಿ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಯುತ್ತದೆ. ಇದರಲ್ಲಿ ಯಾರ ಪ್ರಭಾವವೂ ಇರುವುದಿಲ್ಲ. ಸ್ವಂತ ಪ್ರತಿಭೆ ಮತ್ತು ಬಲಿಷ್ಠತನದಿಂದ ಸೇನೆ ಸೇರಬೇಕು. ಅವರನ್ನೇ ಸೇನೆ ಆಯ್ಕೆ ಮಾಡಲಿದೆ. ಅದು ಬಿಟ್ಟು ಮಧ್ಯವರ್ತಿಗಳ ಮೋಸದ ಬಲೆಗೆ ಬೀಳಬಾರದು ಎಂದು ಅಗ್ನಿವೀರ ಆಕಾಂಕ್ಷಿಗಳಿಗೆ ಸೇನಾ ಅಧಿಕಾರಿಗಳು ಕಿವಿಮಾತು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net