

ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ 5 ಶಾಸಕರು ಜಿಲ್ಲೆಗೆ ಹಾಲಿನ ಡೇರಿ ತರುವ ಬಗ್ಗೆ ಚರ್ಚೆ ನಡೆಸಿದ್ದು ಇದಕ್ಕೆ ಅಗತ್ಯ ಪಯತ್ನ ನಡೆಸಲಾಗುವುದು ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಮೂಡಿಗೆರೆ ಇಲಾಖೆಯ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಪಶು ಸಂಜೀವಿನಿ ಆಂಬುಲೆನ್ಸ್‌ಗೆ ಚಾಲನೆ, ಲಾನುಭವಿಗಳಿಗೆ ಸ್ವತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಲೆನಾಡಿನಲ್ಲಿ ಹೈನುಗಾರಿಕೆಗೆ ವಿಪುಲ ಅವಕಾಶವಿದ್ದು ಹಾಲಿನ ಡೇರಿಯಾದಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಿದಂತಾಗುತ್ತದೆ. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಪಶು ಸಂಜೀವಿನಿ ಆಂಬುಲೆನ್ಸ್ ಸೇವೆ ಆರಂಭವಾಗಿರುವುದು ಉತ್ತಮ ಕಾರ್ಯ. ಇದರಿಂದ ಮಲೆನಾಡು ಭಾಗದ ಗ್ರಾಮೀಣ ಪ್ರದೇಶಗಳಿಗೂ ಹೋಗಿ ಪಶುಗಳಿಗೆ ಆರೋಗ್ಯ ಸೇವೆ ನೀಡಲು ಸಾಧ್ಯ ಎಂದರು.
ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸಿ. ರಮೇಶ್ ಮಾತನಾಡಿ, ಯೋಜನೆಯಗಳ ಸವಲತ್ತು ಅರ್ಹರಿಗೆ ತಲುಪಬೇಕು ಎಂಬ ಉದ್ದೇಶದಿಂದ ನಿಜವಾದ ಲಾನುಭವಿಗಳೇ ಎಂಬುದನ್ನು ಖಚಿತಪಡಿಸಿಕೊಂಡು ಮೇವು ಕತ್ತರಿಸುವ ಯಂತ್ರ, ರಬ್ಬರ್ ನೆಲಹಾಸಿನ ಸವಲತ್ತುಗಳಿಗೆ ಆಯ್ಕೆ ಮಾಡಲಾಗಿದೆ. ಹೈನುಗಾರಿಕೆಯಲ್ಲಿ ತೊಡಗಿರುವವರು ನಿರಂತರವಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯಬಹುದು ಎಂದರು. ಹಿರಿಯ ಪಶು ವೈದ್ಯಾಧಿಕಾರಿ ಡಾ.ಮನು, ಪಶು ವೈದ್ಯಾಧಿಕಾರಿ ಡಾ.ಅಶೋಕ್, ಡಾ.ಹಿತೇಶ್, ಜಾನುವಾರು ಅಧಿಕಾರಿಗಳಾದ ನವೀನ್, ನಾಗೇಂದ್ರ ಹಾಗೂ ಇಲಾಖೆಯ ಸಿಬ್ಬಂದಿ ಇದ್ದರು.