ಇತಿಹಾಸ ಪ್ರಸಿದ್ಧ ಲಕ್ಕುಂಡಿ ‘ವಿಶ್ವ ಪರಂಪರ ಪಟ್ಟಿ’ಗೆ ಸೇರಿಸಲು ಪ್ರಯತ್ನ: ಸಚಿವ ಎಚ್.ಕೆ.ಪಾಟೀಲ

Lakkundi historic place
Published on

ಬೆಂಗಳೂರು: ರಾಜ್ಯದ ಐತಿಹಾಸಿಕ, ನೆಲದ ಸಂಸ್ಕೃತಿ, ಪರಂಪರೆಯ ತಾಣಗಳಲ್ಲಿ ಲಕ್ಕುಂಡಿ, ದಕ್ಖನ್ ಪ್ರಸ್ಥಭೂಮಿ ಸೇರಿವೆ. ಎರಡೂ ತಾಣಗಳನ್ನು ‘ವಿಶ್ವ ಪರಂಪರ ಪಟ್ಟಿ’ (ವರ್ಲ್ಡ್ ಹೆರಿಟೇಜ್ ಸೆಂಟರ್)ಗೆ ಸೇರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ, ಪುರಾತತ್ವ ಇಲಾಖೆ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ವಿಧಾನಸೌಧದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ಜಿಲ್ಲೆಯ ಲಕ್ಕುಂಡಿ ಒಂದು ಸಾವಿರ ವರ್ಷಗಳ ಹಿಂದೆ ಪ್ರಮುಖ ನಗರ, ದೇವಾಲಯಗಳ ನೆಲೆವೀಡು ಎಂದು ಪ್ರಸಿದ್ಧವಾಗಿದೆ.

ಚಾಲುಕ್ಯರು, ಕಲಚೂರಿಗಳು, ಹೊಯ್ಸಳರು ಮುಂತಾದ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಲಕ್ಕುಂಡಿಯಲ್ಲಿ ಟಂಕಸಾಲೆ, ತಲಾ 101 ಗುಡಿ ಹಾಗೂ ಬಾವಿಗಳಿವೆ. ಮಹಾವೀರ ಜೈನ ದೇವಾಲಯ, ಕಲ್ಯಾಣ ಚಾಲುಕ್ಯರ ವಾಸ್ತುಶೈಲಿ, ಆಕರ್ಷಣೀಯ ಕಲಾಶಿಲ್ಪಗಳಿವೆ.

ಬೀದರ್, ವಿಜಯಪುರ ಜಿಲ್ಲೆಗಳು ದಕ್ಖನ್ ಪ್ರಸ್ಥಭೂಮಿಯು ರಾಷ್ಟ್ರಕೂಟರು, ವಿಜಯನಗರ ಅರಸು, ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿವೆ. ಅನೇಕ ಐತಿಹಾಸಿಕ ಸ್ಮಾರಕಗಳು, ನಮ್ಮತನ ಸಾರುವ ಕುರುಹುಗಳು ಈ ಪ್ರದೇಶದಲ್ಲಿವೆ ಎಂದು ವಿವರಿಸಿದರು.

24ರಂದು ವಿಶಿಷ್ಟ ಕಾರ್ಯಕ್ರಮ

ಮೊದಲ ಹಂತದಲ್ಲಿ ಐತಿಹಾಸಿಕ ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವ ಪ್ರಯತ್ನ ಮಾಡಲಿದ್ದು, ಪ್ರಸ್ತಾವನೆ ಸಿದ್ಧಪಡಿಸಲು ಪೂರಕ ಚಟುವಟಿಕೆಗಳು ನಡೆಯಲಿವೆ.ಲಕ್ಕುಂಡಿಯಲ್ಲಿ 24ರಂದು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆ ದಿನ ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ ಉತ್ತಮ ಕಲೆಯ ಕಂಬಗಳು, ತಾಳೆಗರಿ, ಶಾಸನ, ಮೂರ್ತಿಗಳು ಮತ್ತಿತರ ಪ್ರಾಚ್ಯಾವಶೇಷಗಳಿದ್ದರ ಕೊಡಿ ಎಂದು ವಿನಂತಿಸಿ ಸಂಗ್ರಹಿಸಲಾಗುವುದು.

ಐತಿಹಾಸಿಕ ಸ್ಮಾರಕಗಳು ತಿಪ್ಪೆಗುಂಡಿ, ದನಕಟ್ಟಲು, ಬಟ್ಟೆ ಹೊಗೆಯಲು ಬಳಕೆಯಾಗಿವೆ. ಕೆಲವರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಗ್ರಾಮಸ್ಥರ ಮನವೊಲಿಸಿ ತೆರವುಗೊಳಿಸಿ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಲಕ್ಕುಂಡಿಯಲ್ಲಿ ಉತ್ಖನನ ನಡೆದರೆ ಮತ್ತಷ್ಟು ಐತಿಹಾಸಿಕ ಕುರುಹುಗಳು ಸಿಗುವ ಸಾಧ್ಯತೆಯನ್ನು ಅಂದಾಜಿಸಿ, ಉತ್ಖನನ ಕಾರ್ಯ ಕೈಗೆತ್ತಿಕೊಳ್ಳುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಪತ್ರ ಬರೆದು ವಿನಂತಿಸಲಾಗಿದೆ ಎಂದರು.

ಗುಡಿಗಳ ಪುನಶ್ಚೇತನ, ಸ್ಮಾರಕಗಳ ಸಂರಕ್ಷಣೆ ಮುಖೇನ ನಮ್ಮತನ ಜತನ ಮಾಡಿ, ಮುಂದಿನ ಪೀಳಿಗೆಗೆ ಪರಿಚಯಿಸುವುದು ಈ ಪ್ರಯತ್ನ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಐಹೊಳೆ ಪುನರುಜ್ಜೀವನಕ್ಕೆ ಒಪ್ಪಂದ

ಐತಿಹಾಸಿಕ ನೆಲೆ ಐಹೊಳೆ ಪುನರುಜ್ಜೀವನಕ್ಕೆ ಧರ್ಮಸ್ಥಳ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಐಹೊಳೆಯ ಎಂಟು ದೇವಾಲಯಗಳ ಜೀರ್ಣೋದ್ಧಾರ ನಡೆಯಲಿದೆ ಎಂದು ತಿಳಿಸಿದರು.

ಐತಿಹಾಸಿಕ ಗುಡಿಗಳಲ್ಲಿ ಬದುಕು ಕಟ್ಟಿಕೊಂಡಿರುವ ಕುಟುಂಬಗಳನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ 17 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಎಚ್.ಕೆ.ಪಾಟೀಲ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net