ಲಿಂಗ ಪೂಜೆಯಿಂದ ಶಿವಜ್ಞಾನ ಪ್ರಾಪ್ತಿ: ಗುರುಸಿದ್ಧಶಾಸ್ತ್ರಿ

jayanti
ಶಿವಮೊಗ್ಗದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವನ್ನು ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಉದ್ಘಾಟಿಸಿದರು. ಶ್ರೀ ವಿಶ್ವೇಶ್ವರ ಶಿವಾಚಾರ್ಯರು, ಶ್ರೀ ರಾಚೋಟೇಶ್ವರ ಶಿವಾಚಾರ್ಯರು, ರುದ್ರಮುನಿ ಎನ್. ಸಜ್ಜನ್, ಎಚ್.ಉಮೇಶ್, ಕೆ.ಆರ್.ಸೋಮನಾಥ್ ಇತರರಿದ್ದರು.
Published on

ಶಿವಮೊಗ್ಗ: ವೀರಶೈವ ಧರ್ಮದ ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿ ಅವಲೋಕಿಸಿದರೆ ಸುಸಂಸ್ಕೃತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಆಚಾರ್ಯರು, ಬಸವಾದಿ ಶರಣರು ಕೆಲಸ ಮಾಡಿರುವುದನ್ನು ಕಾಣಬಹುದು ಎಂದು ನಿವೃತ್ತ ಪ್ರಾಚಾರ್ಯ ಗುರುಸಿದ್ಧಶಾಸ್ತ್ರಿ ಬಿಟಿಎಂ ಹೇಳಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಜಂಗಮ ಹಾಗೂ ಬೇಡ ಜಂಗಮ ಸಮಾಜದಿಂದ ಬುಧವಾರ ಏರ್ಪಡಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ರೇಣುಕಾಚಾರ್ಯರ ಚಿಂತನೆಗಳು ಸ್ಫೂರ್ತಿದಾಯಕ ಎಂದರು.

ರೇಣುಕಾಚಾರ್ಯರು ಬೋಧಿಸಿದ ಸಿದ್ಧಾಂತ ಶಿಖಾಮಣಿಯಲ್ಲಿ 55 ಲಿಂಗ ಅಂತಸ್ತು ಮತ್ತು 57 ಲಿಂಗಸ್ತರಗಳಿವೆ. ಜೀವ ದೇವನಾಗುವ ಬಗೆಯನ್ನು ಇದರಲ್ಲಿ ಹೇಳಲಾಗಿದೆ. ಲಿಂಗದ ಬಗ್ಗೆ ಶ್ರದ್ಧೆ ಮತ್ತು ಭಕ್ತಿ ಇರುವವರೆಲ್ಲರೂ ಲಿಂಗವನ್ನು ಆರಾಧಿಸಬಹುದು. ಲಿಂಗವನ್ನು ಗುರುದೀಕ್ಷೆ ಮೂಲಕ ಪಡೆಯಬೇಕು ಎಂದು ತಿಳಿಸಿದರು.

ಲಿಂಗ ಪೂಜೆಯಿಂದ ಹಿಂದಿನ ಜನ್ಮದ ಪಾಪ ನಾಶವಾಗಿ ಶಿವಜ್ಞಾನ ಪ್ರಾಪ್ತಿಯಾಗುತ್ತದೆ. ಗುರುವಿನ ರೂಪದಲ್ಲಿ ದೇವರು ಕಾಣಿಸಿಕೊಳ್ಳುತ್ತಾನೆ. ಲಿಂಗ ಕೇವಲ ಕಲ್ಲಲ್ಲ, ವಿಶ್ವ ಚೈತನ್ಯದ ಭಾಗ. ಇದನ್ನು ಪೂಜಿಸಿದರೆ ವಿಶ್ವವನ್ನೇ ಪೂಜಿಸಿದಂತೆ. ಪಂಚಪೀಠಗಳು ಧರ್ಮ ಬೋಧನೆಯನ್ನಷ್ಟೇ ಮಾಡುವುದಿಲ್ಲ. ಆಧ್ಯಾತ್ಮಿಕ, ವಿಜ್ಞಾನ, ಸೌಹಾರ್ದತೆ, ಶಾಂತಿ ಸೂತ್ರಗಳನ್ನು ತಿಳಿಸುತ್ತವೆ ಎಂದರು.

ಮನೋ ಬೆಳವಣಿಗೆ, ಸಂಸ್ಕೃತಿಯ ಬೆಳವಣಿಗೆ ಆಗಬೇಕು. ರೇಣುಕಾಚಾರ್ಯರು ಶಾಂತಿ, ಅಹಿಂಸೆಯನ್ನು ಪ್ರತಿಪಾದಿಸಿದ್ದಾರೆ. ಸಿದ್ಧಾಂತ ಶಿಖಾಮಣಿಯಲ್ಲಿ ಪ್ರಸ್ತಾಪಿಸಿರುವ ದಯೆ, ಕ್ಷಮೆ, ಶಾಂತಿ, ಮನೋನಿಗ್ರಹ, ಪೂಜೆ, ಧ್ಯಾನ ಮತ್ತಿತರ ದಶ ಸೂತ್ರಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.

ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಾರ‌್ನಹಳ್ಳಿ ರಾಮಲಿಂಗೇಶ್ವರ ಮಠದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಕಾರ್ಯಕ್ರಮ ಉದ್ಘಾಟಿಸಿದರು.

ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷ ಚಂದ್ರಯ್ಯ, ಶಿವಮೊಗ್ಗ ತಾಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷ ಎಚ್.ಎಂ.ವೇದಮೂರ್ತಿ, ಜಿಲ್ಲಾ ಬೇಡ ಜಂಗಮ ಸಮಾಜದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಸೋಮನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net