'ಕರೊನಾ ಬಗ್ಗೆ ತಿಳಿವಳಿಕೆ ಹೇಳಿದ್ದಕ್ಕೆ ಹೊಡೆದರು, ನಿಂದಿಸಿದರು': ಆಶಾ ಕಾರ್ಯಕರ್ತೆಯ ಅಳಲು

Shobha 29 May 20
Published on

ಮಂಡ್ಯ: ಕರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದ್ದರೂ, ಅಲ್ಲಲ್ಲಿ ಈ ಹಲ್ಲೆ ಪ್ರಕರಣಗಳು ನಡೆಯುತ್ತಲೇ ಇವೆ.

ಇದೀಗ ಕೆ.ಆರ್​.ಪೇಟೆ ತಾಲೂಕಿನ ಕೊಡಗಹಳ್ಳಿ ಗ್ರಮದಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ನಾಲ್ಕೈದು ಜನ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೊಡಗಹಳ್ಳಿಯ ಮಂಜೇಗೌಡ, ರುದ್ರೇಶ್​, ಪ್ರಿಯಾಂಕಾ, ಗೀತಾ ಮತ್ತು ನಿಖಿಲ್​ ಎಂಬುವರು ಕ್ವಾರಂಟೈನ್​ ಮುಗಿಸಿ ಮನೆಗೆ ಬಂದಿದ್ದರು. 14 ದಿನಗಳ ಕ್ವಾರಂಟೈನ್​ ಮುಗಿಸಿ ಬಂದ ಅವರಿಗೆ, ನಿಯಮಗಳನ್ನು ತಿಳಿಸಲೆಂದು ಆಶಾ ಕಾರ್ಯಕರ್ತೆ ಕೆ.ವೈ.ಶೋಭಾ ಅವರು ಹೋಗಿದ್ದರು.

ಮನೆಗೆ ಹೋದ ಶೋಭಾ, ಅವರಿಗೆ ಇನ್ನೂ ಸ್ವಲ್ಪ ದಿನ ಹೋಂ ಕ್ವಾರಂಟೈನ್​ನಲ್ಲಿರಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ನಿಯಮ ಪಾಲನೆ ಮಾಡಿ ಎಂದು ಹೇಳುತ್ತಿದ್ದಂತೆ ಆಕ್ರೋಶದಿಂದ, ನಿನ್ನದು ಅತಿಯಾಯ್ತು, ನಮ್ಮ ಮೇಲೆ ದೌರ್ಜನ್ಯ ಮಾಡುತ್ತೀಯಾ? ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹೊಡೆದಿದ್ದಾರೆ. ಈ ಬಗ್ಗೆ ಶೋಭಾ ಅವರೇ ತಿಳಿಸಿದ್ದಾರೆ.

ಒಂದು ತಿಂಗಳ ಹಿಂದೆ ಅದೇ ಮನೆಯ ಇನ್ನೋರ್ವನಿಗೆ ಕ್ವಾರಂಟೈನ್​ ಸೀಲ್​ ಹಾಕಲು ಹೋದಾಗಲೂ ನಿಂದಿಸಿದ್ದರು. ಇದೀಗ ಹೊಡೆದಿದ್ದಾರೆ ಎಂದು ಶೋಭಾ ಹೇಳಿದ್ದಾರೆ.

ಹಲ್ಲೆಗೊಳಗಾದ ಶೋಭಾ ಅವರಿಗೆ ಕೆ.ಆರ್​.ಪೇಟೆ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net