

ಶಿವಮೊಗ್ಗ: ಹಿಂದುಗಳ ಧಾರ್ಮಿಕ ಕೇಂದ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಹಿಂದುಗಳ ಆಸ್ತಿಕ ಪ್ರಜ್ಞೆ, ಅಸ್ಮಿತೆ ಮೇಲೆ ದಾಳಿ ನಡೆದ ಸಂದರ್ಭ ನಮ್ಮ ಸಂಘಟನೆ ಹಿಂದು ಸಮಾಜದ ಪರವಾಗಿ ನಿಂತಿದೆ ಎಂದು ವಿಎಚ್‌ಪಿ ಹಾಗೂ ಬಜರಂಗದಳ ಪ್ರಮುಖರು ಹೇಳಿದ್ದಾರೆ.
ನಗರದಲ್ಲಿ ಏರ್ಪಡಿಸಿದ್ದ ಓಂ ನಮಃ ಶಿವಾಯ ಅಭಿಯಾನದಲ್ಲಿ ಮಾತನಾಡಿದ ದಿಗಂಬರ ಜೈನ ಸಂಘದ ಸಹಕಾರ್ಯದರ್ಶಿ ರತ್ನಕುಮಾರ್, ನಮ್ಮ ರಾಜ್ಯದಲ್ಲಿ ರಾಜರಿಂದ ಹಿಡಿದು ಪಾಶ್ಚಾತ್ಯ ಆಡಳಿತಗಾರರ ಅವಧಿಯಲ್ಲೂ ಮಠ, ಮಂದಿರಗಳೇ ಆಧ್ಯಾತ್ಮಿಕ ಕೇಂದ್ರವಾಗಿದ್ದವು. ಧರ್ಮಸ್ಥಳದಲ್ಲಿ ಜಾತಿ ಭೇದವಿಲ್ಲದೆ 400ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ವೈದ್ಯಕೀಯ ಕಾಲೇಜು ನಡೆಸಲಾಗುತ್ತದೆ. ಸಾಮೂಹಿಕ ಮದುವೆ ಆಯೋಜಿಸಲಾಗುತ್ತದೆ. ಕೆರೆ ಹಾಗೂ ದೇವಾಲಯಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಹೇಳಿದರು.
ಧರ್ಮಸ್ಥಳದ ವಿರುದ್ಧ ದೂರು ನೀಡುತ್ತಿರುವ ಕೆಲವರ ಹಿನ್ನೆಲೆಯನ್ನೂ ನಾವು ಗಮನಿಸಬೇಕು. ಕ್ಷೇತ್ರದ ವಿರುದ್ಧ ಆರೋಪ ಮಾಡುತ್ತಿರುವ ಕೆಲವರು ಈಗಾಗಲೇ ಜೈಲಿಗೆ ಹೋಗಿಬಂದವರು. ಅವರ ಆರ್ಥಿಕ ವ್ಯವಹಾರಗಳಲ್ಲಿ ನಷ್ಟವಾದಾಗಲೆಲ್ಲ ಡಾ. ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ವಿರುದ್ಧ ತಿರುಗಿಬೀಳುತ್ತಾರೆ. ಇಂತಹ ಪಿತೂರಿಗಳಿಗೆ ಹಿಂದು ಸಮಾಜ ಬಲಿಯಾಗಬಾರದು. ನಮ್ಮ ಧಾರ್ಮಿಕ ಕ್ಷೇತ್ರವನ್ನು ನಾವು ರಕ್ಷಿಸಿಕೊಳ್ಳಬೇಕು ಎಂದರು.
ಸಾಮಾಜಿಕ ಸಾಮರಸ್ಯ ಪ್ರಮುಖ್ ರಮೇಶ್ ಬಾಬು, ವಿಎಚ್‌ಪಿ ನಗರಾಧ್ಯಕ್ಷ ವಿನೋದ್‌ಕುಮಾರ ಜೈನ್, ನಗರ ಕಾರ್ಯದರ್ಶಿ ಆನಂದರಾವ್ ಜಾಧವ್, ಪ್ರಮುಖರಾದ ರಾಜೇಶ್ ಗೌಡ, ಅಂಕುಶ್ ಇತರರಿದ್ದರು.