ಠಾಣೆಯಲ್ಲೇ ಪೊಲೀಸರ ಮೇಲೆ ಹಲ್ಲೆ

PS
Published on

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ದೂರು ಕೊಡಲು ಪೊಲೀಸ್ ಠಾಣೆಗೆ ಬಂದ ಮಹಿಳೆಯರ ಗುಂಪು ಇನ್‌ಸ್ಪೆಕ್ಟರ್, ಮಹಿಳಾ ಎಸ್‌ಐ ಸೇರಿದಂತೆ ಸಿಬ್ಬಂದಿ ಹಲ್ಲೆ ನಡೆಸಿ ನಿಂದಿಸಿ ಬೆದರಿಕೆ ಒಡ್ಡಿದ್ದಾರೆ.

ಜ್ಞಾನಭಾರತಿ ಠಾಣೆಯಲ್ಲಿ ಬುಧವಾರ ಮಧ್ಯಾಹ್ನ 3.30ರಲ್ಲಿ ನಡೆದಿದ್ದು, ಹಲ್ಲೆಗೆ ಒಳಗಾದ ಮಹಿಳಾ ಎಸ್‌ಐ ಸುರೇಖಾ, ದೂರು ಸಲ್ಲಿಸಿದ್ದಾರೆ.ಈಮೇರೆಗೆ ಪ್ರಕರಣ ದಾಖಲಿಸಿಕೊಂಡು ಆಯೇಷಾ ತಾಜ್, ಫೌಜಿಯಾ ಮತ್ತು ಆರ್ಬಿನ್ ತಾಜ್ ಎಂಬುವರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಶೊಯೇಬ್ ಮತ್ತು ನಾಸೀರ್ ಇತರರು ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೈನಾನ್ಸಿಯರ್ ನಾಸೀರ್, 25 ಸಾವಿರ ರೂ. ಕೊಟ್ಟಿದ್ದ. ಈ ಸಂಬಂಧ ಮೂವರು ಮಹಿಳೆಯರು ಮತ್ತು ಶೊಯೇಬ್ ನಡುವಿನ ಸಂಘರ್ಷ ನಡೆದಿತ್ತು. ಈ ವಿಚಾರಕ್ಕಾಗಿ ಪರಸ್ಪರರು ನಿಂದಿಸಿಕೊಂಡು ಜ್ಞಾನಭಾರತಿ ಠಾಣೆಗೆ ಬಂದಿದ್ದರು. ದೂರು ನೀಡದೆ ಪರಸ್ಪರರು ಠಾಣೆಯಲ್ಲೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಮತ್ತೊಂದು ದೂರು ವಿಚಾರಣೆ ನಡೆಸುತ್ತಿದ್ದ ಪೊಲೀಸರು, ಠಾಣೆ ಪಕ್ಕದಲ್ಲಿ ಇರುವ ಕುರ್ಚಿ ಮೇಲೆ ಕುಳಿತುಕೊಳ್ಳುವಂತೆ ಸಲಹೆ ನೀಡಿದ್ದರು.

ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಠಾಣೆ ಎದುರಿಗೆ ಬಂದು ಗಲಾಟೆ, ಕೂಗಾಟ ಶುರು ಮಾಡಿದ್ದರು. ಕರ್ತವ್ಯಕ್ಕೆ ಅಡ್ಡಿ ಉಂಟಾಗುತ್ತಿದೆ. ಗಲಾಟೆ ಮಾಡಬೇಡಿ ಎಂದು ಸಮವಸದಲ್ಲಿದ್ದ ಮಹಿಳಾ ಪಿಎಸ್‌ಐ ತಿಳುವಳಿಕೆ ಹೇಳಿದ್ದಕ್ಕೆ ‘ನೀನು ಯಾರೇ, ನಾವು ಗಲಾಟೆ ಮಾಡಿಕೊಂಡರೆ ನಿನಗೇನು ತೊಂದರೆ ಆಗುತ್ತದೆ. ನಾವು ಹೂಮನ್ ರೈಟ್ಸ್‌ನಲ್ಲಿ ಕೆಲಸ ಮಾಡುವವರು’ ಎಂದು ಏರು ಧ್ವನಿಯಲ್ಲಿ ಅಧಿಕಾರಿ ಮೇಲೆ ಜಗಳ ಶುರು ಮಾಡಿದ್ದರು.

ಪಿಎಸ್‌ಐ ಕಡೆಗೆ ಕೈ ತೋರಿಸಿ ನಿನ್ನ ಕೆಲಸವನ್ನು ನೀನು ನೋಡಿಕೋ ಹೋಗೇ ಎಂದು ಏಕವಚನದಲ್ಲಿ ನಿಂದಿಸಿ ಗಲಾಟೆ ಮಾಡುತ್ತಿದ್ದರು. ಅಷ್ಟೊತ್ತಿಗೆ ಠಾಣೆಯಲ್ಲಿದ್ದ ಮಹಿಳಾ ಸಿಬ್ಬಂದಿಯಾದ ಚೆನ್ನಮ್ಮ, ರೇಖಾ, ಅಕ್ಕಮ್ಮ, ವೀಣಾ, ಲಕ್ಷ್ಮೀ, ಗೀತಾಶ್ರೀ ಮತ್ತು ಪಿಎಸ್‌ಐಗಳಾದ ಕಿರಣ್‌ಕುಮಾರ್, ಡಿ.ಆರ್. ಮೋಹನ್ ಕುಮಾರ್ ಗಲಾಟೆ ಬಿಡಸಲು ಮುಂದಾಗುತ್ತಾರೆ.

ಆದರೂ ಮಹಿಳೆಯರ ಗ್ಯಾಂಗ್ ಗಲಾಟೆ ನಿಲ್ಲಿಸುವುದಿಲ್ಲ. ವಿಷಯ ತಿಳಿದು ಪಹರೆ ಕರ್ತವ್ಯದಲ್ಲಿದ್ದ ಚೇತನ್‌ಕುಮಾರ್, ಯಾಸೀನ್ ಭಗವಾನ್ ಮತ್ತು ವೇಣುಗೋಪಾಲ್ ಬಂದು ಜಗಳ ಅತೋಟಿಗೆ ತರಲು ಮುಂದಾಗುತ್ತಾರೆ. ಮತ್ತಷ್ಟು ಕೆರಳಿದ ಮಹಿಳೆಯೊಬ್ಬಳು, ಮಹಿಳಾ ಕಾನ್‌ಸ್ಟೆಬಲ್ ರೇಖಾ ಕಪಾಳಕ್ಕೆ ಹೊಡೆದು, ಉಗುರುಗಳಿಂದ ಪರಚಿ ಅಶ್ಲೀಲ ಪದಗಳಿಂದ ನಿಂದಿಸುತ್ತಾಳೆ.

ಕಾನ್‌ಸ್ಟೆಬಲ್ ರಕ್ಷಣೆಗೆ ಮುಂದಾದ ಪಿಎಸ್‌ಐ ಸುರೇಖಾ ಅವರ ಬಲಗೈಗೂ ಪರಚಿ ಹಲ್ಲೆ ನಡೆಸಿದ್ದಳು. ರಕ್ಷಣೆಗೆ ಬಂದ ಮಹಿಳಾ ಪೊಲೀಸರ ಮೇಲೂ ಗಲಾಟೆ ಮಾಡಿ ಹಲ್ಲೆ ನಡೆಸಿ ರಂಪಾಟ ನಡೆಸಿ ಅಶ್ಲೀಲ ಪದಗಳಿಂದ ನಿಂದಿಸಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆ ಒಳಗೆ ಕರೆತಂದಾಗ ಆಗಲೂ ಹೂಮನ್ ರೈಟ್ಸ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಪೊಲೀಸರಗೆ ಬೆದರಿಸಿದ್ದಾರೆ. ನಮ್ಮ ಮೇಲೆ ಕೈ ಮಾಡಿದರೆ ನಿಮಗೊಂದು ಗತಿ ಕಾಣಿಸುತ್ತೇವೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಇದರ ಮೇರೆಗೆ ಹಲ್ಲೆ, ಸರ್ಕಾರಿ ಕೆಲಸಕ್ಕೆ ಅಡ್ಡಿ ಸೇರಿದಂತೆ ಇತರ ಆರೋಪದ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್‌ಸ್ಪೆಕ್ಟರ್ ಮೇಲೂ ಹಲ್ಲೆ :

ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್ ಎಂ.ಎಸ್.ರವಿ, ಎಸ್‌ಐ ಸುರೇಖಾ, ಕಾನ್‌ಸ್ಟೆಬಲ್‌ಗಳಾದ ರೇಖಾ, ಚೆನ್ನಮ್ಮ, ಅಕ್ಕಮ್ಮ ಹಲ್ಲೆಗೆ ಒಳಗಾದವರು.

ಸುಳ್ಳು ಹೆಸರು ಹೇಳಿದ್ದ ಮಹಿಳೆಯರು:

ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾಗ ಮೂವರು ಮಹಿಳೆಯರು ಸುಳ್ಳು ಹೆಸರು ಹೇಳಿ ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಿದ್ದರು. ಆಯೇಷಾ ತಾಜ್ ಎಂಬಾಕೆ ಸನ್ಮಾ ಎಂದು ಹೇಳಿದ್ದಳು. ಅದೇ ರೀತಿಯಾಗಿ ೌಜಿಯಾ ಖಾನಂ ಎಂಬಾಕೆ ರುಕ್ಸಾನಾ ಎಂದು ಮತ್ತು ಅರ್ಬೀನ್ ಎಂಬಾಕೆ ಜುಬೀನಾ ಎಂದು ಸುಳ್ಳು ಹೇಳಿದ್ದಳು. ಆಧಾರ್ ಪರಿಶೀಲನೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net