

ಬಾಳೆಹೊನ್ನೂರು: ಎನ್.ಆರ್.ಪುರ ತಾಲೂಕಿನ ಮೇಲ್ಪಾಲ್‌ನ ಆಯುಷ್ ವೈದ್ಯ ಗಣೇಶ್‌ಭಟ್ ಎಂಬುವವರ ಮೇಲೆ ಅದೇ ಗ್ರಾಮದ ಸ್ವಾಗತ್ ಮತ್ತು ಆತನ ತಾಯಿ ಸರಸ್ವತಿ ಶುಕ್ರವಾರ ಹಲ್ಲೆ ನಡೆಸಿದ್ದಾರೆ.
ಕೃಷಿಕರೂ ಆಗಿರುವ ಡಾ.ಗಣೇಶ್ ಅವರ ಜಮೀನು ಮೇಲ್ಪಾಲ್‌ನಲ್ಲಿದೆ. ಶುಕ್ರವಾರ ಬೆಳಗ್ಗೆ ಗಣೇಶ್ ಅವರ ಪಕ್ಕದ ತೋಟದವರಾದ ಸ್ವಾಗತ್, ಸರಸ್ವತಿ ಗಣೇಶ್ ಅವರ ತೋಟದ ಕಾರ್ಮಿಕ ರವೀಂದ್ರ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ವೈದ್ಯ ಗಣೇಶ್ ಹಲ್ಲೆಗೊಳಗಾದ ಕಾರ್ಮಿಕನ ಚಿಕಿತ್ಸೆಗೆ ತೆರಳಿದ್ದಾರೆ. ಆಗ ಸ್ವಾಗತ್, ಸರಸ್ವತಿ ವೈದ್ಯರ ಮೇಲೂ ಕತ್ತಿಯಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ವೈದ್ಯ ಗಣೇಶ್ ಅವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ವೈದ್ಯ ಗಣೇಶ್ ಹಾಗೂ ಕಾರ್ಮಿಕ ರವೀಂದ್ರ ಬಾಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿಗಳಾದ ಸ್ವಾಗತ್ ಹಾಗೂ ಸರಸ್ವತಿ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.