

ಕೋಲಾರ: ತಾಲೂಕಿನ ಕೂಟೇರಿ ಸಮೀಪದ ನೀಲಗಿರಿ ತೋಪಿನಲ್ಲಿ ಜೂಜಾಡುತ್ತಿದ್ದ ಅಡ್ಡೆಯ ಮೇಲೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಗುರುವಾರ ದಾಳಿ ಮಾಡಿ 8 ಮಂದಿಯನ್ನು ಬಂಧಿಸಿ, 35,150 ರೂ. ನಗದು ಹಾಗೂ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಕೀಲಾರಿಪೇಟೆ ನಿವಾಸಿ ಕಿಶೋರ್ ಜೂಜಾಡಿಸುತ್ತಿರುವುದು ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಎಸ್ಪಿ ಬಿ.ನಿಖಿಲ್ ಮಾರ್ಗದರ್ಶನದಲ್ಲಿ, ಗ್ರಾಮಾಂತರ ಠಾಣೆ ಸಿಪಿಐ ಕೆ.ಕಾಂತರಾಜ್, ಪಿಎಸ್ಐ ಭಾರತಿ ಸಿಬ್ಬಂದಿಯೊಂದಿಗೆ ದಾಳಿ ಮಾಡಿದ್ದಾರೆ.
ತಾಲೂಕಿನ ಶಿಳ್ಳಂಗೆರೆ ಗಜೇಂದ್ರ (30), ಶೆಟ್ಟಹಳ್ಳಿ ಪುರುಷೋತ್ತಮ್ (42), ಚಂಜಿಮಲೆ ಶ್ರೀನಿವಾಸ್ (42), ಬಂಗಾರಪೇಟೆ ತಾಲೂಕು ನತ್ತಬೆಲೆ ರಂಗೋಜಿ (42), ನಾರಾಯಣಪುರ ಗ್ರಾಮದ ಮಂಜುನಾಥ್ (33), ಜೆಸಿ ಹಳ್ಳಿ ಅರುಣ್ (26), ಶ್ರೀನಿವಾಸಪುರ ತಾಲೂಕಿನ ಹಲಗಪಲ್ಲಿ ಮುನಿವೆಂಕಟಪ್ಪ (48), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಚಿಕ್ಕನಹಳ್ಳಿ ವಿಜಯ್ (35)ನನ್ನು ಬಂಧಿಸಿದ್ದಾರೆ. ಜೂಜಾಡಿಸುತ್ತಿದ್ದ ಕಿಲಾರಿಪೇಟೆ ಕಿಶೋರ್ ಪರಾರಿಯಾಗಿದ್ದು, ಪೊಲೀಸರು ಪತ್ತೆಗೆ ತಂಡ ರಚಿಸಿದ್ದಾರೆ.