

ಶೃಂಗೇರಿ: ವೇದಾಂತದ ಶಾಶ್ವತ ಲಗಳಲ್ಲಿ ಶಾಂತಿ, ಸಮನ್ವಯ, ಸಹಿಷ್ಣುತೆ ಮತ್ತು ಸ್ವೀಕಾರಗಳು ಪ್ರಮುಖ. ಮಾನವನ ಸಂಪೂರ್ಣ ಬೆಳವಣಿಗೆಗೆ ಅವನ ಅಂತರಂಗದಲ್ಲಿ ಇರುವ ಆತ್ಮದ ಕುರಿತು ಪರಿಜ್ಞಾನ ಬೆಳೆಸಿಕೊಳ್ಳಬೇಕು ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.
ಗುರುನಿವಾಸದ ಸಚ್ಚಿದಾನಂದ ವಿಲಾಸದಲ್ಲಿ ಭಾನುವಾರ ಅದ್ವೈತ್ವ ಗೋಷ್ಠಿಯಲ್ಲಿ ಆಶೀರ್ವಚನ ನೀಡಿದ ಅವರು, ಅದ್ವೈತ ತತ್ವ ಸರಳವಾದುದು. ಆತ್ಮದಿಂದಲೇ ಎಲ್ಲ ಶಕ್ತಿಗಳು ಮೂಡುತ್ತದೆ. ಅದು ಪರಿಶುದ್ಧ ಚೈತನ್ಯಸ್ವರೂಪಿ. ಇಂತಹ ಚೈತನ್ಯವನ್ನು ಅನೇಕ ವಿಧದಲ್ಲಿ ಅನುಭವಕ್ಕೆ ತಂದುಕೊಳ್ಳಲು ಸಾಧ್ಯವಿಲ್ಲ ಎಂದರು.
ಅದ್ವೈತ ಎಂದರೆ ಒಂದೇ ಎಂದರ್ಥ. ಜೀವಿಯಲ್ಲಿ ಇರುವ ಆತ್ಮ ಹಾಗೂ ಪರಮ ಸತ್ಯವಾದ ಬ್ರಹ್ಮ ಚೈತನ್ಯ ಒಂದೇ ಆಗಿರುತ್ತದೆ. ಉಪನಿಷತ್ತಿನಲ್ಲಿ ಈ ತತ್ವದ ಕುರಿತು ಸಾಕಷ್ಟು ಉಲ್ಲೇಖಗಳಿವೆ. ಹೊರಗಿನಿಂದ ಬರುವ ವಸ್ತುಗಳನ್ನು ನಾವು ನಿರಾಕರಿಸಬಹುದು. ಆದರೆ ನಮ್ಮೊಳಗಿನ ಚೈತನ್ಯವನ್ನು ನಾವು ನಿರಾಕರಿಸಲು ಅಸಾಧ್ಯ ಎಂದು ಹೇಳಿದರು.
ಆತ್ಮ ಜ್ಞಾನಸ್ವರೂಪಿ. ಆತ್ಮವೇ ಬ್ರಹ್ಮ. ಅದನ್ನು ನಾವು ಅರಿಯುವ ಯತ್ನ ಮಾಡಬೇಕು ಎಂದು ಶ್ರೀ ಶಂಕರ ಭಗವತ್ಪಾದರು ತಿಳಿಸಿದ್ದಾರೆ. ಭಾರತದ ಉದ್ದಗಲಕ್ಕೂ ಸಂಚರಿಸಿ ದೇಶದ ಐಕಮತ್ಯ ಇಲ್ಲಿದೆ ಎಂದು ಸಾರಿ ಸನಾತನ ಧರ್ಮದ ಮೌಲ್ಯ ಹಿಡಿದೆತ್ತಿದ್ದಾರೆ. ಭದವತ್ಪಾದರು ಆಳವಾದ ಸಹಾನುಭೂತಿಯಿಂದ ಸಾಮಾನ್ಯ ಜನರ ಶ್ರದ್ಧೆ, ನಿಷ್ಠೆಗಳಿಗೆ ಪಾತ್ರವಾದ ಲೋಕಗುರು ಎಂದರು.
ಗೋಷ್ಠಿಯಲ್ಲಿ ಆಸ್ಥಾನ ವಿದ್ವಾನ್ ನಾಗರಾಜ ಭಟ್ಟ, ವಿದ್ವಾಂಸರಾದ ಗಣೇಶ್ ಈಶ್ವರ್ ಭಟ್, ರಾಘವೇಂದ್ರ ಅರೋಳ್ಳಿ, ಗಣೇಶ್ ಹೆಗಡೆ, ತಂಗಿರಾಲ ಸೀತಾರಾಮಶರ್ಮ ಇತರರು ಅದ್ವೈತ ತತ್ವದ ಕುರಿತು ಉಪನ್ಯಾಸ ನೀಡಿದರು.