

ದೇಶಾದ್ಯಂತ ರಾಜಕಾರಣಿಗಳಲ್ಲೂ ಕರೊನಾ ಸೋಂಕು ಹೆಚ್ಚಾಗುತ್ತಿದ್ದು, ರಾಜ್ಯವೊಂದರಲ್ಲೇ ಮೂವರು ಸಚಿವರು ಸೇರಿ ಒಟ್ಟು ಸುಮಾರು 15 ಶಾಸಕರಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎನ್ನಲಾಗಿದೆ.
ಅಧಿವೇಶನದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಜನಪ್ರತಿನಿಧಿಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಡಿಶಾದಲ್ಲಿ ನಡೆದ ಈ ಪರೀಕ್ಷೆಯಲ್ಲಿ ಅಲ್ಲಿನ ಉಪ ಸಭಾಪತಿ ರಜನಿಕಾಂತ್ ಸಿಂಗ್ ಸೇರಿ ಮೂವರು ಸಚಿವರಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ.
ನನ್ನ ಕೋವಿಡ್ ಟೆಸ್ಟ್ ವರದಿ ಪಾಸಿಟಿವ್ ಬಂದಿದ್ದು, ನಾನು ಭುವನೇಶ್ವರದ ಎಸ್ಯುಎಮ್ ಆಸ್ಪತ್ರೆಗೆ ದಾಖಲಾಗಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆಬಂದ ಎಲ್ಲರೂ ಪರೀಕ್ಷೆಗೆ ಒಳಗಾಗಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಉಪ ಸಭಾಪತಿ ಟ್ವೀಟ್ ಮೂಲಕ ಕೋರಿಕೊಂಡಿದ್ದಾರೆ.
ಒಡಿಶಾದ ಅಧಿವೇಶನ ನಾಳೆಯಿಂದಲೇ ಆರಂಭಗೊಳ್ಳಲಿದ್ದು, ಅ. 7ರಂದು ಮುಗಿಯಲಿದೆ. ಆದರೆ ಈಗಾಗಲೇ ನಡೆದ ಕೋವಿಡ್ ಪರೀಕ್ಷೆಯಲ್ಲಿ ಕನಿಷ್ಠ 15 ಶಾಸಕರಿಗೆ ಸೋಂಕು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)