

ಕೋಲಾರ: ಎರಡು ದಶಕಗಳ ಹೋರಾಟದ ಫಲವಾಗಿ ವಿಶ್ವೇಶ್ವರಯ್ಯ ಕ್ರೀಡಾಂಗಣ ಸಿಂಥೆಟಿಕ್ ಟ್ರಾ$್ಯಕ್ ಆಗಿ ಅಭಿವೃದ್ಧಿಯಾಗಿದ್ದು, ಯುವ ಕ್ರೀಡಾಪಟುಗಳು ಕ್ರೀಡಾಂಗಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪ್ಯಾರಾ ಒಲಂಪಿಕ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಕೆ.ಜಯದೇವ್ ಹೇಳಿದರು.
ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬುಧವಾರ ಬೆಳಿಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿರುವ ಅಥ್ಲೆಟಿಕ್ಸ್ ಹಾಗೂ ಜುಡೋ ಕ್ರೀಡಾ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡಾಪಟುಗಳ ಒತ್ತಾಸೆಯ ಹೋರಾಟದಿಂದಾಗಿ ಸುಸಜ್ಜಿತ ಕ್ರೀಡಾಂಗಣ ರೂಪುಗೊಂಡಿದ್ದು, ಇದೇ ಕ್ರೀಡಾಂಗಣದಲ್ಲಿ ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸಲು ಸಿದ್ಧತೆ ನಡೆಸಿದ್ದು, ಎಲ್ಲ ಕ್ರೀಡಾಪಟುಗಳು ಸಹಕಾರ ನೀಡಬೇಕೆಂದು ಕೋರಿದರು.
ಯುವ ಪೀಳಿಗೆಯ ವಿದ್ಯಾರ್ಥಿಗಳು ಬೇಸಿಗೆ ಶಿಬಿರವನ್ನು ಸದುಪಯೋಗಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಕ್ರೀಡೆಯಲ್ಲಿ ರಾಷ್ಟ್ರೀಯ&ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತರುವ ಕ್ರೀಡಾಪಟುಗಳಾಗಿ ರೂಪುಗೊಳ್ಳಬೇಕು ಎಂದು ಆಶಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ಮಾತನಾಡಿ, ಯುವ ಪೀಳಿಗೆಯಲ್ಲಿ ಉತ್ತಮ ಅಥ್ಲೆಟಿಕ್ಸ್ ಹಾಗೂ ಜುಡೋ ಕ್ರೀಡಾಪಟುಗಳನ್ನು ತಯಾರು ಮಾಡುವ ಗುರಿ ಇಟ್ಟುಕೊಂಡು ಇಲಾಖೆಯು ಸಂಪೂರ್ಣ ಉಚಿತವಾಗಿ ಅಥ್ಲೆಟಿಕ್ಸ್ ಹಾಗೂ ಜುಡೋ ಬೇಸಿಗೆ ಶಿಬಿರವನ್ನು ಆರಂಭಿಸಿದ್ದು, ಎರಡು ಹಂತಗಳ ಈ ಶಿಬಿರದಲ್ಲಿ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೊದಲ ಹಂತದ ಶಿಬಿರವು ಏ.2 ರಿಂದ ಮೇ.1 ರವರೆಗೆ ಹಾಗೂ ಎರಡನೇ ಹಂತದ ಮೇ.2 ರಿಂದ 26 ರವರೆವಿಗೂ ನಡೆಯಲಿದೆ, ಅಥ್ಲೆಟಿಕ್ಸ್ನಲ್ಲಿ 10 ರಿಂದ 16 ವಯೋಮಾನ ಹಾಗೂ ಜುಡೋಗೆ 10 ರಿಂದ 21 ವಯೋಮಾನದವರು ಭಾಗವಹಿಸಲು ಅವಕಾಶವಿದ್ದು, ಉಚಿತ ಬೇಸಿಗೆ ಶಿಬಿರವಾಗಿದೆ ಎಂದು ತಿಳಿಸಿದರು.
ಹಿರಿಯ ಕ್ರೀಡಾ ತರಬೇತುದಾರ ಜಗನ್ ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಾಂಗದ ಜೊತೆ ಕ್ರೀಡೆಯನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಉದ್ಯೋಗ ಗಿಟ್ಟಿಸಿಕೊಳ್ಳುವುದರ ಜೊತೆಗೆ, ಜೀವನ ಪೂರ್ತಿ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವೆಂದರು.
ವಾಕಿಂಗ್ ಗೆಳೆಯರ ಬಳಗದ ಅಧ್ಯಕ್ಷ ದೇವರಾಜ್, ಪತ್ರಕರ್ತ ಕೆ.ಎಸ್.ಗಣೇಶ್, ಬಳಸದ ಸದಸ್ಯ ವೆಂಕಟಶಿವಪ್ಪ, ಕ್ರೀಡಾಪಟುಗಳಾದ ರಾಜೇಶ್, ಗೌಸ್ಖಾನ್, ಹಾಬಿ ರಮೇಶ್, ರಾಜಣ್ಣ, ಅಮರನಾರಾಯಣ ಉಪಸ್ಥಿತರಿದ್ದರು.