ಪಾಕಿಸ್ತಾನದಲ್ಲಿ ಭೀಕರ ರೈಲು ಅಪಘಾತ; ಡಿಕ್ಕಿ ರಭಸಕ್ಕೆ ಬಸ್ ಮೂರು ಪೀಸ್​​, 20 ಮಂದಿ ದುರ್ಮರಣ

Bus Train 29 Feb 20
Published on

ಕರಾಚಿ: ಪಾಕಿಸ್ತಾನದ ಸಿಂಧ್​ ಪ್ರಾಂತ್ಯದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಸುಮಾರು 20 ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ ರೋಹ್ರಿ ರೈಲ್ವೆ ಸ್ಟೇಶನ್​ ಬಳಿ ದುರ್ಘಟನೆ ನಡೆದಿದೆ. ವೇಗವಾಗಿ ಓಡುತ್ತಿದ್ದ ರೈಲು, ರೈಲ್ವೆ ಕ್ರಾಸಿಂಗ್ ಬಳಿ ಪ್ರಯಾಣಿಕರ ಬಸ್​ಗೆ ಡಿಕ್ಕಿ ಹೊಡೆದಿದೆ.

ಸುಕ್ಕೂರ್ ಆಯುಕ್ತ ಶಫೀಕ್ ಅಹ್ಮದ್ ಮಹೇಸರ್ ಅವರು ಘಟನೆ ಬಗ್ಗೆ ಮಾಹಿತಿ ನೀಡಿದ್ದು, 20 ಮಂದಿ ಮೃತಪಟ್ಟಿದ್ದಾಗಿ ದೃಢಪಡಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಸುಮಾರು 60 ಜನರನ್ನು ಸುಕ್ಕೂರ್ ಹಾಗೂ ರೊಹ್ರಿ ಆಸ್ಪತ್ರೆಗಳಿಗೆ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.

45 ಯುಪಿ ಪಾಕಿಸ್ತಾನ ಎಕ್ಸ್​ಪ್ರೆಸ್ ರೈಲು ರಾವಲ್ಪಿಂಡಿಯಿಂದ ಕರಾಚಿಗೆ ತೆರಳುತ್ತಿತ್ತು. ಈ ವೇಳೆ ಕಂಧ್ರಾದಲ್ಲಿರುವ ಮಾನವ ರಹಿತ ರೈಲ್ವೆ ಕ್ರಾಸಿಂಗ್​ ಬಳಿ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿದ್ದ ಬಸ್​ಗೆ ಡಿಕ್ಕಿಯಾಗಿದೆ. ಈ ಬಸ್​ನಲ್ಲಿ ಸುಮಾರು 50 ಮಂದಿ ಇದ್ದರು.

ರೈಲು ಡಿಕ್ಕಿ ಹೊಡೆದ ರಭಸಕ್ಕೆ ಬಸ್​ ಮೂರು ಭಾಗಗಳಾಗಿ ಬಿದ್ದಿದೆ. ಅಷ್ಟೇ ಅಲ್ಲದೆ, ಬಸ್​ ರೈಲಿನಡಿ ಸಿಲುಕಿ ಸುಮಾರು 150-200 ಮೀಟರ್​ವರೆಗೆ ಎಳೆದುಕೊಂಡು ಹೋಗಲ್ಪಟ್ಟಿದೆ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.

ಅಪಘಾತದಲ್ಲಿ ಕೆಲವರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಮತ್ತೊಂದಷ್ಟು ಜನರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ದುರ್ಘಟನೆಗೆ ಬಸ್​ ಚಾಲಕನ ಪ್ರಮಾದವೇ ಕಾರಣ ಎಂದು ಪಾಕ್​ ರೈಲ್ವೆ ಇಲಾಖೆ ವಕ್ತಾರ ತಿಳಿಸಿದ್ದಾರೆ. ಅಲ್ಲದೆ, ರೈಲಿನ ಇಂಜಿನ್​ಗೆ ಹಾನಿಯಾಗಿದೆ. ಸಹಾಯಕ ಚಾಲಕ ಗಾಯಗೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net