30ಕ್ಕೆ ಕಾಂತರಾಜ್ ವರದಿ ಚಿಂತನ-ಮಂಥನ

ti.na. Srinivas
ಜಿಲ್ಲಾ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಜನ ಜಾಗೃತಿ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್.
Published on

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಜನ ಜಾಗೃತಿ ವೇದಿಕೆಯಿಂದ ಕಾಂತರಾಜ್ ಅವರ ಶಾಶ್ವತ ಹಿಂದುಳಿದ ವರ್ಗ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಚಿಂತನ-ಮಂಥನ ಕಾರ್ಯಕ್ರಮವನ್ನು ಅ.30ರಂದು ಬೆಳಗ್ಗೆ 11ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್ ತಿಳಿಸಿದರು.

ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸಿಎಂ ಆಗಿದ್ದಾಗ ಹಿಂದುಳಿದ ವರ್ಗಗಳ ಸಮೀಕ್ಷೆಗೆ ಕಾಂತರಾಜ್ ಅವರನ್ನು ನೇಮಕ ಮಾಡಿದ್ದರು. ಕಾಂತರಾಜ್ ಅವರ ವರದಿ ಸಿದ್ಧಗೊಂಡು ಹಲವು ವರ್ಷಗಳೇ ಕಳೆದರೂ ಜಾರಿಗೊಳಿಸಲು ಎಲ್ಲ ಪಕ್ಷಗಳೂ ಮೀನಮೇಷ ಎಣಿಸುತ್ತಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸಮೀಕ್ಷೆಗಾಗಿ ಸರ್ಕಾರ ಜನರ ತೆರಿಗೆ ಹಣ 165 ಕೋಟಿ ರೂ. ವ್ಯಯಿಸಿದೆ. 2.16 ಲಕ್ಷ ಜನರ ಸರ್ವೆ ಮಾಡಲಾಗಿದೆ. ವರದಿ ಸರ್ಕಾರಕ್ಕೆ ಸಲ್ಲಿಸಿರುವುದಾಗಿ ಕಾಂತರಾಜ್ ಅವರೇ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಸಿಎಂ ಸಿದ್ದರಾಮಯ್ಯ ಐದು ಬಾರಿ ವರದಿ ಅನುಷ್ಠಾನಗೊಳಿಸಲು ಸಿದ್ಧವಿದೆ ಎಂದಷ್ಟೆ ಹೇಳಿದ್ದಾರೆ. ಐದು ತಿಂಗಳು ಕಳೆದರೂ ಮೀನಮೇಷ ಎಣಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಎಲ್ಲ ಜನಪ್ರತಿನಿಧಿಗಳ ಪೈಕಿ ಕಾಂತರಾಜ್ ವರದಿ ಬಗ್ಗೆ ಧ್ವನಿ ಎತ್ತಿದವರು ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಮಾತ್ರ. ಹಾಗಾಗಿ ಕಾರ್ಯಕ್ರಮವನ್ನು ಹರಿಪ್ರಸಾದ್ ಅವರು ಉದ್ಘಾಟಿಸುವರು. ಹಾಗಾಗಿ ಅವರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಉಳಿದಂತೆ ಜಿಲ್ಲೆಯ ಸವಿತಾ, ಗಂಗಾಮತ, ಬಲಿಜ, ಈಡಿಗ, ಸಾಧುಶೆಟ್ಟಿ, ದೇವಾಂಗ, ಕುಂಚಟಿಗ, ಬಣಜಾರ, ಚಲವಾದಿ ಒಳಗೊಂಡಂತೆ ಎಲ್ಲ ಹಿಂದುಳಿದ ವರ್ಗಗಳ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ನೂತನ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮ ಸಂಚಾಲಕ ಆರ್.ಮೋಹನ್, ಮುಖಂಡರಾದ ಶ್ರೀನಿವಾಸ್, ವಿ.ಮುರುಗೇಶ್, ಪದ್ಮನಾಭ್, ಬಿ.ರಾಮಚಂದ್ರ ನಾಯ್ಕ, ಸತ್ಯನಾರಾಯಣ ಚಿಕ್ಕಮರಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net