ವಿಶ್ವದ ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆ.. 700 ಕಿಮೀ ಎತ್ತರದಲ್ಲಿ ನೌಕೆಯಿಂದ ಹೊರಬಂದ ಇಬ್ಬರು ಗಗನಯಾತ್ರಿಗಳು!

space x
Published on

ವಾಷಿಂಗ್ಟನ್​: ಎಲೋನ್ ಮಸ್ಕ್ ಅವರ ಕಂಪನಿ ಸ್ಪೇಸ್‌ಎಕ್ಸ್‌ನ ಪೊಲಾರಿಸ್ ಡಾನ್ ಮಿಷನ್‌ನ ಭಾಗವಾಗಿ ಭೂಮಿಯಿಂದ 700 ಕಿಮೀ ಎತ್ತರದಲ್ಲಿ ಬಾಹ್ಯಾಕಾಶ ನೌಕೆಯಿಂದ ಇಬ್ಬರು ಗಗನಯಾತ್ರಿಗಳು ಹೊರಬಂದು ಹೆಜ್ಜೆಹಾಕಿದರು. ಆ ಮೂಲಕ ಇದು ವಿಶ್ವದ ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆ ಎನಿಸಿಕೊಂಡಿತು.

ಬಾಹ್ಯಾಕಾಶ ನಡಿಗೆಯ ಸಮಯದಲ್ಲಿ ಬಾಹ್ಯಾಕಾಶ ನೌಕೆಯ ವೇಗ ಗಂಟೆಗೆ 25ಸಾವಿರ ಕಿ.ಮೀ. ಇತ್ತು. ಪೋಲಾರಿಸ್ ಡಾನ್ ಮಿಷನ್ ಅನ್ನು ಸೆಪ್ಟೆಂಬರ್ 10 ರಂದು(ಮಂಗಳವಾರ) ಪ್ರಾರಂಭಿಸಲಾಯಿತು. ಈ ಕಾರ್ಯಾಚರಣೆಯಲ್ಲಿ 4 ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಿದ್ದಾರೆ. ಈ ಗಗನಯಾತ್ರಿಗಳಲ್ಲಿ ಇಬ್ಬರಾದ ಮಿಷನ್ ಕಮಾಂಡರ್ ಜೇರೆಡ್ ಇಸೆಕ್ಮನ್ ಮತ್ತು ಮಿಷನ್ ಸ್ಪೆಷಲಿಸ್ಟ್ ಸಾರಾ ಗಿಲ್ಲಿಸ್ ಸುಮಾರು 10 ನಿಮಿಷ ಬಾಹ್ಯಾಕಾಶ ನಡಿಗೆ ಮಾಡಿದರು.

ಬಾಹ್ಯಾಕಾಶ ನಡಿಗೆಯ ನಂತರ, ಬಾಹ್ಯಾಕಾಶ ನೌಕೆಯ ಹ್ಯಾಚ್ ಅನ್ನು ಮುಚ್ಚಲಾಯಿತು. ಈ 5 ದಿನಗಳ ಕಾರ್ಯಾಚರಣೆ ಇದಾಗಿದ್ದು, ಗಗನಯಾತ್ರಿಗಳು 50 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಯಾವುದೇ ಗಗನಯಾತ್ರಿಗಳು ಹೋಗದ ಕಕ್ಷೆಗೆ ಹೋಗಿದ್ದಾರೆ. ಎಲೋನ್ ಮಸ್ಕ್ ಕಂಪನಿಯ ಫಾಲ್ಕನ್-9 ರಾಕೆಟ್‌ನಿಂದ ಈ ಕಾರ್ಯಾಚರಣೆ ನಡೆಸಲಾಗಿದೆ.

ಪೋಲಾರಿಸ್ ಡಾನ್ ಮಿಷನ್‌ನ ಉದ್ದೇಶ ಬಾಹ್ಯಾಕಾಶ ನಡಿಗೆ ಮತ್ತು ಮಾನವನ ಆರೋಗ್ಯಕ್ಕೆ ಸಂಬಂಧಿಸಿದ 36 ಸಂಶೋಧನೆ ಮತ್ತು ಪ್ರಯೋಗಗಳನ್ನು ನಡೆಸುವುದಾಗಿದೆ. ಇದಲ್ಲದೆ, ಸ್ಟಾರ್‌ಲಿಂಕ್‌ನ ಲೇಸರ್ ಆಧಾರಿತ ಸಂವಹನವನ್ನು ಬಾಹ್ಯಾಕಾಶದಲ್ಲಿ ಪರೀಕ್ಷಿಸಲಾಗುತ್ತದೆ. ಇಬ್ಬರು ಸ್ಪೇಸ್‌ಎಕ್ಸ್ ಉದ್ಯೋಗಿಗಳು ಪೋಲಾರಿಸ್ ಡಾನ್ ಮಿಷನ್‌ನ ಭಾಗವಾಗಿರುವುದು ಇದೇ ಮೊದಲು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net