ಆಸ್ಟ್ರಾಜೆನಿಕಾಗೆ ಬ್ರಿಟನ್ ಒಪ್ಪಿಗೆ: ಫೈಜರ್ ಬಳಿಕ ಮತ್ತೊಂದು ಲಸಿಕೆಗೆ ಅನುಮತಿ ನೀಡಿದ ಸರ್ಕಾರ

Astra
Published on

ಲಂಡನ್: ಕರೊನಾ ಚಿಕಿತ್ಸೆಗಾಗಿ ಆಸ್ಟ್ರಾಜೆನಿಕಾ ಔಷಧ ಕಂಪನಿ ಮತ್ತು ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಲಸಿಕೆ ಬಳಕೆಗೆ ಬ್ರಿಟನ್ ಬುಧವಾರ ಅನುಮೋದನೆ ನೀಡಿದೆ. 2021ರ ಜನವರಿ 4ರಿಂದ ಈ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತದೆ.

ಆಕ್ಸ್​ಫರ್ಡ್ ಲಸಿಕೆಯನ್ನು ಸಾಮಾನ್ಯ ಶೀತಲೀಕೃತ ಪರಿಸ್ಥಿತಿಗಳಲ್ಲಿ ಸಂಗ್ರಹ, ಸಾಗಾಟ ಮತ್ತು ನಿರ್ವಹಣೆ ಮಾಡಲು ಸಾಧ್ಯ. ಹೀಗಾಗಿ ಅದು ಫೈಜರ್ ಮತ್ತು ಬಯೋಎನ್​ಟೆಕ್ ಹಾಗೂ ಮಾಡರ್ನಾ ಲಸಿಕೆಗಳಿಗಿಂತ ಅಗ್ಗವಾಗಿದ್ದು ಜನರಿಗೆ ನೀಡಲೂ ಸುಲಭ. ಬೇರೆಲ್ಲ ಲಸಿಕೆಗಳಿಗೆ ಹೆಚ್ಚಿನ ಶೀತಲೀಕರಣ ವ್ಯವಸ್ಥೆ ಅಗತ್ಯವಾಗುತ್ತದೆ. ಔಷಧಗಳು ಮತ್ತು ಆರೋಗ್ಯಆರೈಕೆ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂಎಚ್​ಆರ್​ಎ) ಮಾಡಿದ ಶಿಫಾರಸುಗಳನ್ನು ಬುಧವಾರ ಅಂಗೀಕರಿಸಿ ಆಕ್ಸ್​ಫರ್ಡ್ ಲಸಿಕೆಗೆ ಅನುಮೋದನೆ ನೀಡಿರುವುದಾಗಿ ಬ್ರಿಟನ್ ಸರ್ಕಾರ ಬುಧವಾರ ಹೇಳಿದೆ. ಬ್ರಿಟನ್, ಆಕ್ಸ್​ಫರ್ಡ್ ಲಸಿಕೆ ಉತ್ಪಾದನೆ ಆರಂಭಿಸ ಲಿರುವ ಮೊದಲ ದೇಶ ವಾಗಲಿದೆ ಎಂದು ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್​ಕಾಕ್ ತಿಳಿಸಿದ್ದಾರೆ. ಈ ಹಿಂದೆ ಬ್ರಿಟನ್, ಡಿಸೆಂಬರ್2ರಂದು ಫೈಜರ್-ಬಯೋ ಎನ್​ಟೆಕ್ ಲಸಿಕೆ ಬಳಕೆಗೆ ಸಮ್ಮತಿಸಿತ್ತು.

ಹೊಸ ವರ್ಷಾಚರಣೆಗೆ ನಿರ್ಬಂಧ

ರೂಪಾಂತರಿ ವೈರಸ್ ಸಹಿತ ಕರೊನಾ ಸಾಂಕ್ರಾಮಿಕತೆಯ ಗಂಭೀರತೆಯ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ನಿರ್ಬಂಧಗಳನ್ನು ವಿಧಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸಲಹೆ ಮಾಡಿದೆ. ಸ್ಥಳೀಯ ಪರಿಸ್ಥಿತಿಗಳನ್ನು ಆಧರಿಸಿ ಡಿಸೆಂಬರ್ 30, 31 ಮತ್ತು ಜನವರಿ 1ರಂದು ನಿರ್ಬಂಧಗಳನ್ನು ಹೇರುವಂತೆ ಸೂಚಿಸಲಾಗಿದೆ. ಕಳೆದ ಮೂರುವರೆ ತಿಂಗಳಿಂದ ದೇಶದಲ್ಲಿ ಕರೊನಾ ಸಕ್ರಿಯ ಪ್ರಕರಣಗಳು ಇಳಿಮುಖವಾಗುತ್ತಿವೆ. ಆದರೆ ಯುರೋಪ್ ಮತ್ತು ಅಮೆರಿಕದಲ್ಲಿ ಹೊಸ ಅಲೆ ಆರಂಭವಾಗಿರುವುದರಿಂದ ಇನ್ನಷ್ಟು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವುದು ಅಗತ್ಯ ಎಂದು ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಭಾರತದಲ್ಲೂ ಶೀಘ್ರ ಒಪ್ಪಿಗೆ ಸಾಧ್ಯತೆ

ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಎರಡು ಪ್ರಮುಖ ಲಸಿಕೆಗಳಿಗೆ ಸದ್ಯದಲ್ಲೇ ಕೇಂದ್ರ ಸರ್ಕಾರದ ಅನುಮೋದನೆ ಸಿಗುವ ಸಾಧ್ಯತೆ ಇದೆ. ಆಕ್ಸ್​ಫರ್ಡ್ - ಆಸ್ಟ್ರಾಜೆನಿಕಾ ಮತ್ತು ಭಾರತ್ ಬಯೊಟೆಕ್ ಲಸಿಕೆಗೆ ಅನುಮೋದನೆ ನೀಡುವ ಕುರಿತು ಬುಧವಾರ ಉನ್ನತ ಮಟ್ಟದ ತಜ್ಞರ ಸಭೆ ನಡೆದಿದೆ. ಈ ವೇಳೆ ಲಸಿಕೆ ಸಂಬಂಧಿಸಿದ ದತ್ತಾಂಶಗಳನ್ನು ಪರಿಶೀಲನೆ ನಡೆಸಲಾಗಿದ್ದು, ಇನ್ನಷ್ಟು ಮಾಹಿತಿ ನೀಡುವಂತೆ ತಜ್ಞರು ಕಂಪನಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಜ.1ರಂದು ಮತ್ತೆ ಈ ಸಮಿತಿ ಸಭೆ ಸೇರಲಿದೆ.

ಭಾರತದಲ್ಲಿ 20 ಪ್ರಕರಣ ಪತ್ತೆ

ಬ್ರಿಟನ್​ನಲ್ಲಿ ಪತ್ತೆಯಾದ ರೂಪಾಂತರಿ ಕರೊನಾ ವೈರಸ್ ಸೋಂಕಿನ 14 ಹೊಸ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿದೆ. ಒಟ್ಟಾರೆ ಈ ಸೋಂಕಿಗೆ ತುತ್ತಾದವರ ಸಂಖ್ಯೆ 20ಕ್ಕೆ ಏರಿದೆ. ಕೇಂದ್ರ ಸರ್ಕಾರ ಬುಧವಾರ ಈ ಮಾಹಿತಿ ನೀಡಿದೆ. ಏಳು ಪ್ರಕರಣಗಳು ಬೆಂಗಳೂರಿನ ಲ್ಯಾಬ್​ನಲ್ಲಿ ದಾಖಲಾಗಿವೆ. ಈ ಸಂಖ್ಯೆ ಇನ್ನೂ ಹೆಚ್ಚುವ ಸಂಭವವಿದೆ ಎಂದು ಹೇಳಲಾಗಿದೆ. ರೂಪಾಂತರಿ ವೈರಸ್ ಹೆಚ್ಚು ಮಾರಕವಾದುದು ಹಾಗೂ ಲಸಿಕೆಯಿಂದ ಅದನ್ನು ನಿಯಂತ್ರಣಕ್ಕೆ ತರಲಾಗದು ಎಂಬುದಕ್ಕೆ ಇದುವರೆಗೆ ಸ್ಪಷ್ಟ ಪುರಾವೆ ಸಿಕ್ಕಿಲ್ಲ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಹೊಸ ಪ್ರಕರಣ ತುಸು ಏರಿಕೆ

ಬುಧವಾರ ದೇಶದಲ್ಲಿ ಕರೊನಾ ಸೋಂಕಿನ 20,549 ಹೊಸ ಪ್ರಕರಣಗಳು ವರದಿಯಾಗಿವೆ. ಇದು ಮಂಗಳವಾರ ದಾಖಲಾಗಿದ್ದಕ್ಕಿಂತ ಶೇ. 25 ಅಧಿಕವಾಗಿದೆ. ಭಾರತದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 1,02,44,852ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಆರು ತಿಂಗಳಲ್ಲಿ ಇದೇ ಮೊದಲ ಬಾರಿಗೆ 2.7 ಲಕ್ಷಕ್ಕಿಂತ ಕೆಳಗೆ ಕುಸಿದಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ವಿಮಾನ ನಿರ್ಬಂಧ ಜ.7ರ ವರೆಗೆ ವಿಸ್ತರಣೆ

ರೂಪಾಂತರಿ ವೈರಸ್ ಹಾವಳಿಗೆ ತುತ್ತಾದ ಬ್ರಿಟನ್​ಗೆ ಹೋಗುವ ಹಾಗೂ ಅಲ್ಲಿಂದ ಬರುವ ವಿಮಾನಗಳ ಸಂಚಾರದ ಮೇಲಿನ ನಿರ್ಬಂಧವನ್ನು ಭಾರತ ಜನವರಿ 7ರ ವರೆಗೆ ವಿಸ್ತರಿಸಿದೆ. ಅದರ ನಂತರ, ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವ ಮೂಲಕ ಸೀಮಿತ ಸಂಚಾರ ಆರಂಭವಾಗಲಿದೆ. ವಿವರಗಳನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ ಎಂದು ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.

ಶೇಕಡ 80 ಪರಿಣಾಮಕಾರಿ

ಆಸ್ಟ್ರಾಜೆನಿಕಾ - ಆಕ್ಸ್ ಫರ್ಡ್ ಲಸಿಕೆ ಶೇ. 80 ಪರಿಣಾಮಕಾರಿ ಎಂದು ಬ್ರಿಟನ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಸಿಕೆಯನ್ನು 2 ಡೋಸ್​ಗಳಲ್ಲಿ ನೀಡಲಾಗುತ್ತದೆ. ಒಂದು ಮತ್ತು ಎರಡನೇ ಡೋಸ್ ನಡುವೆ 3 ತಿಂಗಳ ಅಂತರ ಕಾಯ್ದುಕೊಂಡರೆ ಈ ಲಸಿಕೆ ಶೇ. 80 ಪರಿಣಾಮಕಾರಿ ಆಗಲಿದೆ. ಬ್ರಿಟನ್​ನಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚಿನ ಜನರಿಗೆ ಲಸಿಕೆ ನೀಡುವ ಅಗತ್ಯ ಇರುವ ಕಾರಣ ಅರ್ಧ ಡೋಸ್ ಬಳಕೆ ಕುರಿತೂ ಚಿಂತನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ವುಹಾನ್​ನಲ್ಲಿ 5 ಲಕ್ಷ ಸೋಂಕಿತರು?

ಕರೊನಾ ಸಾಂಕ್ರಾಮಿಕತೆಯ ಮೊದಲ ಕೇಂದ್ರ ಬಿಂದು ಚೀನಾದ ವುಹಾನ್​ನಲ್ಲಿ ಸೋಂಕಿತರ ಸಂಖ್ಯೆ ಅಧಿಕಾರಿಗಳು ಬಹಿರಂಗಪಡಿಸಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚಿರಬಹುದೆಂದು ಅಧ್ಯಯನವೊಂದು ತಿಳಿಸಿದೆ. ಸುಮಾರು 50,000 ಜನರು ಸೋಂಕಿಗೆ ಒಳಗಾಗಿದ್ದರೆಂದು ಸರ್ಕಾರ ಹೇಳಿತ್ತು. ಆದರೆ, ವಾಸ್ತವವಾಗಿ 5 ಲಕ್ಷ ಮಂದಿ ರೋಗದಿಂದ ಬಳಲಿರುವ ಸಾಧ್ಯತೆಯಿದೆ ಎಂದು ಚೀನಾ ಆರೋಗ್ಯ ಇಲಾಖೆಯೇ ನಡೆಸಿದ ಅಧ್ಯಯನ ಅಭಿಪ್ರಾಯಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net