ಸಂವಿಧಾನ ಅಪಾಯದಲ್ಲಿದೆ ಎಂದು ಹೇಳಿ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಅಸಿಸ್ಟೆಂಟ್​ ಕಮಾಂಡೆಂಟ್!​

Suhel ahamed marur
Published on

ಬೆಂಗಳೂರು: ಸಂವಿಧಾನ ಅಪಾಯದಲ್ಲಿದೆ ಎಂದು ಹೇಳಿ ನಿನ್ನೆಯ (ನ.26) ಸಂವಿಧಾನ ದಿನದಂದೇ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ್ದಾರೆ.

ಸುಹೇಲ್​ ಅಹಮದ್​​ ರಾಜೀನಾಮೆ ನೀಡಿದ ಅಧಿಕಾರಿ. ಆಂತರಿಕ ಭದ್ರತಾ ವಿಭಾಗದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ 1ನೇ ಪಡೆಗೆ ಅಸಿಸ್ಟೆಂಟ್​ ಕಮಾಂಡೆಂಟ್​ ಆಗಿದ್ದರು. ಇದೀಗ ಆ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ತಮ್ಮ ಫೇಸ್​ಬುಕ್​ ಖಾತೆಯಲ್ಲಿ ರಾಜೀನಾಮೆ ಪತ್ರವನ್ನು ಪೋಸ್ಟ್​ ಮಾಡಿರುವ ಸುಹೇಲ್​ ಅಹಮದ್​​, ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಂವಿಧಾನದ ತತ್ವ ಆಶಯಗಳು ಅಪಾಯದಲ್ಲಿರುವುದರಿಂದ ಸಂವಿಧಾನ ನನಗೆ ಕೊಡುಗೆಯಾಗಿ ನೀಡಿರುವ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗೆ, ದೇಶಕ್ಕೆ ಸಂವಿಧಾನ ಸಮರ್ಪಣೆಯಾದ ಮಹತ್ವದ ದಿನದಂದೇ ಸಂವಿಧಾನದ ಕಾಯಕಲ್ಪ ಸಂಕಲ್ಪದೊಂದಿಗೆ ರಾಜಿನಾಮೆ ಸಲ್ಲಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ರಾಜೀನಾಮೆ ಪತ್ರದಲ್ಲಿ ಏನಿದೆ?

ಸುಹೇಲ್​ ಅಹಮದ್​, ಅಸಿಸ್ಟೆಂಟ್​ ಕಮಾಂಡೆಂಟ್​ ಆದ ನಾನು ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಂವಿಧಾನದ ತತ್ವಗಳು ಅಪಾಯದಲ್ಲಿ ಇರುವುದರಿಂದ ಸಂವಿಧಾನ ನನಗೆ ಕೊಡುಗೆಯಾಗಿ ನೀಡಿರುವ ಅಸಿಸ್ಟೆಂಟ್​ ಕಮಾಂಡೆಂಟ್​ ಹುದ್ದೆಯನ್ನು ದೇಶಕ್ಕೆ ಸಂವಿಧಾನ ಸಮರ್ಪಣೆಯಾದ ಈ ಮಹತ್ವದ ದಿನದಂದು ಸಂವಿಧಾನ ಕಾಯಕಲ್ಪ ಸಂಕಲ್ಪದೊಂದಿಗೆ ನನ್ನ ಹುದ್ದೆಯನ್ನು ಸಮರ್ಪಿಸಿ, ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಮತ್ತು ರಾಜೀನಾಮೆ ಪತ್ರವನ್ನು ಅಂಗೀಕರಿಸಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಪೊಲೀಸ್​ ಪ್ರದಾನ ಕಚೇರಿಯ ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕರಿಗೆ ಸುಹೇಲ್​ ಅಹಮದ್​ ರಾಜೀನಾಮೆ ಪತ್ರವನ್ನು ಬರೆದಿದ್ದಾರೆ. ಅಂದಹಾಗೆ ನ.26 ಸಂವಿಧಾನ ದಿನವನ್ನಾಗಿ ಆಚರಣೆ ಮಾಡುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net