ಕಾನೂನು ಸೇವಾ ಪ್ರಾಧಿಕಾರದಿಂದ ನಿರೀಕ್ಷೆಗೂ ಮೀರಿದ ನೆರವು

27M.D.R.6
ಮದ್ದೂರಿನ ಗ್ಲೋಬಲ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್.ಹರಿಣಿ ಉದ್ಘಾಟಿಸಿದರು. ಎಸ್.ಸಿ.ನಳಿನಿ, ಶಿವನಂಜಯ್ಯ, ಎಂ.ಎನ್.ಶಿವಣ್ಣ, ಎಂ.ಜೆ.ಸುಮಂತ್, ಸರ್ವಮಂಗಳಾ, ಎಂ.ಎಸ್.ಸಂತೋಷ್‌ಗೌಡ ಇದ್ದರು.
Published on

ಮದ್ದೂರು: ಕಾನೂನಿನ ಅರಿವಿನ ಜತೆಗೆ ಸಿಗಬಹುದಾದ ನೆರವಿನ ಕುರಿತಾಗಿ ಬಹಳಷ್ಟು ಸಾರ್ವಜನಿಕರಿಗೆ ಈವರೆವಿಗೂ ತಿಳಿದಿಲ್ಲದ ಕಾರಣವಾಗಿ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಅಗತ್ಯ ಕಾರ್ಯಕ್ರಮ ರೂಪಿಸಿರುವುದಾಗಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್.ಹರಿಣಿ ತಿಳಿಸಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಪಟ್ಟಣದ ಗ್ಲೋಬಲ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಾನವ ಕಳ್ಳಸಾಗಣೆ ವಿರೋಧಿ ದಿನ, ಬಾಲ್ಯವಿವಾಹ ಪದ್ಧತಿ ನಿಷೇಧ ಕಾಯ್ದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯ್ದೆು ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಎಲ್ಲ ವರ್ಗದ ಜನರು ಯಾವುದೇ ಸಂದರ್ಭದಲ್ಲಿ ನ್ಯಾಯ ವಂಚಿತರಾಗಬಾರದೆಂಬ ಸದುದ್ದೇಶದಿಂದ ತಾಲೂಕು ಮಟ್ಟದಿಂದ ಆರಂಭಗೊಂಡು ಸುಪ್ರೀಂ ಕೋರ್ಟ್‌ವರೆವಿಗೂ ಆರ್ಥಿಕವಾಗಿ ಹಿಂದುಳಿದ ಮೂರು ಲಕ್ಷ ರೂ. ವಾರ್ಷಿಕ ಆದಾಯಕ್ಕಿಂತ ಕೆಳಗಿರುವ ಮತ್ತು ಮಹಿಳೆಯರು, ಮಕ್ಕಳು ಸೇರಿದಂತೆ ಇತರರಿಗೆ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ನಿರೀಕ್ಷೆಗೂ ಮೀರಿದ ನೆರವು ಲಭ್ಯವಿದ್ದು ಅಗತ್ಯವುಳ್ಳವರು ಸದ್ಬಳಕೆ ಮಾಡಿಕೊಳ್ಳುವಂತೆ ಹೇಳಿದರು.

ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯ ಶಾಲಾ ಮತ್ತು ಕಾಲೇಜು ಅವಧಿಯಲ್ಲಿ ಅಗತ್ಯವಿರುವ ಕಾನೂನಿನ ಬಗ್ಗೆ ತಿಳುವಳಿಕೆ ಹೊಂದುವ ಜತೆಗೆ ಪಾಲಕರು, ನೆರೆಹೊರೆಯವರು ಹಾಗೂ ಸಾರ್ವಜನಿಕರಿಗೆ ಉಚಿತ ಕಾನೂನು ನೆರವು ಕುರಿತಾಗಿ ಸಹಾಯ ಮಾಡುವಂತೆ ತಿಳಿಸಿದರು.

ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಸ್.ಸಿ.ನಳಿನಿ ಮಾತನಾಡಿ, ಬಾಲ್ಯವಿವಾಹ, ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಇನ್ನಿತರ ಕಾಯ್ದೆಗಳ ಕುರಿತಾಗಿ ಪ್ರತಿಯೊಬ್ಬರಿಗೂ ಅರಿವು ಉಂಟು ಮಾಡುವ ಮತ್ತು ಕೃತ್ಯಗಳ ಕುರಿತಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಧಿಸಲ್ಪಡುವ ಶಿಕ್ಷೆಯ ಪ್ರಮಾಣದ ಅರಿವಿದಲ್ಲಿ ಅಪರಾಧಗಳ ಪ್ರಮಾಣ ತಾನಾಗೆ ಕ್ಷೀಣಿಸುವ ಕುರಿತಾಗಿ ವಿವರಿಸಿದರು.

ಸಂಪನ್ಮೂಲ ಭಾಷಣಕಾರರಾದ ಎಸ್.ಜಯರಾಮು, ಎಚ್.ಬಿ.ನಾಗೇಶ್ ಕಾರ್ಯಕ್ರಮದ ವೇಳೆ ವಿಶೇಷ ಕಾನೂನು ಉಪನ್ಯಾಸ ಮಂಡಿಸಿದರು. ಸರ್ವಶಿವ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಶಿವನಂಜಯ್ಯ, ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ, ಕಾರ್ಯದರ್ಶಿ ಎಂ.ಜೆ.ಸುಮಂತ್, ಪುರಸಭೆ ಸದಸ್ಯೆ ಬಿ.ಸಿ.ಸರ್ವಮಂಗಳಾ, ಸಂಸ್ಥೆಯ ಸಿಇಒ ಎಂ.ಎಸ್.ಸಂತೋಷ್‌ಗೌಡ, ಮುಖ್ಯಶಿಕ್ಷಕಿ ಎ.ವಿ.ಪಾವನಾ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net