ಸ್ವತ್ತು ಮಾರ್ಗಸೂಚಿ ದರ ಹೆಚ್ಚಳಕ್ಕೆ ನಿರ್ಧಾರ: ಬೆಂಗಳೂರಿನಲ್ಲಿ ಅ.1 ರಿಂದ ಜಾರಿ: ಕೃಷ್ಣ ಬೈರೇಗೌಡ

KrishnaByreGowda
Published on

ಬೆಂಗಳೂರು: ಭೂಮಿ ಮಾರಾಟಗಾರರು ಹಾಗೂ ರೈತರ ಹಿತದೃಷ್ಟಿ, ಕಪ್ಪಹಣ ವಹಿವಾಟಿಗೆ ಕಡಿವಾಣ ದೃಷ್ಟಿಯಲ್ಲಿಟ್ಟುಕೊಂಡು ಸ್ವತ್ತುಗಳ ಮಾರ್ಗಸೂಚಿದರ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಅ.1 ರಿಂದ ಪರಿಷ್ಕೃತ ಮಾರ್ಗಸೂಚಿ ದರ(ಗೈಡೆನ್ಸ್ ವ್ಯಾಲ್ಯೂ) ಜಾರಿಯಾಗಲಿದೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು. ನೋಂದಣಿ ಇಲಾಖೆ ಕಾನೂನಿನ ಪ್ರಕಾರ ಪ್ರತಿ ವರ್ಷ ಮಾರ್ಗಸೂಚಿ ದರ ಪರಿಷ್ಕರಣೆಯಾಗಬೇಕು. ಆದರೆ ಐದು ವರ್ಷದಿಂದ ಮಾರ್ಗಸೂಚಿ ದರ ಪರಿಷ್ಕರಣೆಯಾಗಿಲ್ಲ. ಇದರಿಂದ ಹಲವು ಕಡೆಗಳಲ್ಲಿ ಭೂಮಿ ಮಾರಾಟಗಾರರು ಮತ್ತು ರೈತರಿಗೆ ಅನ್ಯಾಯವಾಗಿದೆ. ಅಲ್ಲದೆ, ಕಪ್ಪು ಹಣ ವಹಿವಾಟಿಗೂ ಕಾರಣವಾಗಿದೆ. ಕಾರಣ ನೂತನ ಮಾರ್ಗಸೂಚಿ ದರ ಜಾರಿಯಾಗಲಿದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಅ.1 ರಂದು ಬೆಂಗಳೂರಿನಲ್ಲಿ ಪರಿಷ್ಕೃತ ದರ ಜಾರಿಯಾಗಲಿದೆ. ಉಳಿದಂತೆ ಪ್ರತಿ ಜಿಲ್ಲೆಯಲ್ಲಿ ಅಲ್ಲಿನ ಉಪ ಸಮಿತಿ ಚರ್ಚಿಸಿ ನೂತನ ಮಾರ್ಗಸೂಚಿ ದರವನ್ನು ಹಂತಹಂತವಾಗಿ ಜಾರಿಗೊಳಿಸಲಿವೆ ಎಂದರು. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತೆ ಡಾ. ಬಿ.ಆರ್.ಮಮತ ಉಪಸ್ಥಿತರಿದ್ದರು.

ಮಾರ್ಗಸೂಚಿ ದರ ಎಷ್ಟೆಷ್ಟು ಹೆಚ್ಚಳ?

-ಮಾರುಕಟ್ಟೆ ದರಕ್ಕೂ ಮಾರ್ಗಸೂಚಿ ದರಕ್ಕೂ ಸಾಮ್ಯತೆ ಇರುವ ಪ್ರದೇಶಗಳಲ್ಲಿ ಮಾರ್ಗಸೂಚಿ ದರವನ್ನು ಶೇ.10 ರಷ್ಟು ಏರಿಕೆ ಮಾಡಲಾಗಿದೆ.

-ಮಾರ್ಗಸೂಚಿ ದರಕ್ಕಿಂತ ಮಾರುಕಟ್ಟೆ ದರ 200 ಪಟ್ಟು ಹೆಚ್ಚಿರುವ ಪ್ರದೇಶಗಳಲ್ಲಿ ಪರಿಷ್ಕೃತ ದರವನ್ನು ಶೇ.20 ರಿಂದ 25 ರಷ್ಟು ಹೆಚ್ಚಿಸಲಾಗಿದೆ.

-ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಮಾರುಕಟ್ಟೆ ದರ ಮಾರ್ಗಸೂಚಿ ದರಕ್ಕಿಂತ 500 ಪಟ್ಟು ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭೂಮಿಗಳಿಗೆ ಮಾರ್ಗಸೂಚಿ ದರ 5 ರಿಂದ 10 ಲಕ್ಷ ಇದ್ದರೆ, ಮಾರುಕಟ್ಟೆ ದರ 10 ಕೋಟಿಗೂ ಅಧಿಕವಿದೆ. ಇಂತಹ ಪ್ರದೇಶಗಳಲ್ಲಿ ನೂತನ ಮಾರ್ಗಸೂಚಿ ದರವನ್ನು ಶೇ.50ರಷ್ಟು ಹೆಚ್ಚಿಸಲಾಗಿದೆ.

-ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಾಗಿದ್ದರೆ, ಅಂತಹ ಭಾಗದಲ್ಲಿ ಮಾರ್ಗಸೂಚಿ ದರವನ್ನು ಮತ್ತಷ್ಟು ಕಡಿಮೆ ಮಾಡಲಾಗುತ್ತದೆ.

-ಮಾರ್ಗಸೂಚಿ ದರ ಶೇ.0 ಯಿಂದ ಶೇ.50ರ ವರೆಗೆ ಪ್ರತಿಯೊಂದು ಪ್ರದೇಶಕ್ಕೂ ಸಂಬಂಧಿಸಿದಂತೆ ಪ್ರಕರಣದಿಂದ ಪ್ರಕರಣಕ್ಕೆ ಹೆಚ್ಚಾಗಲಿದೆ.

-ಒಟ್ಟಾರೆ ಪರಿಷ್ಕೃತ ಮಾರ್ಗಸೂಚಿ ದರ ಸರಾಸರಿ ಶೇ.25 ರಿಂದ 30 ರಷ್ಟು ಹೆಚ್ಚಾಗಲಿದೆ.

ಆಕ್ಷೇಪಣೆ ಸಲ್ಲಿಕೆಗೂ ಅವಕಾಶ.

ಮಾರ್ಗಸೂಚಿ ದರಕ್ಕೂ ಮಾರುಕಟ್ಟೆ ದರಕ್ಕೂ ಹೆಚ್ಚು ವ್ಯತ್ಯಾಸ ಇರಬಾರದೆಂಬ ಕಾನೂನಿದೆ. ಹೀಗಾಗಿ ಈ ನ್ಯೂನತೆ ತಕ್ಕ ಮಟ್ಟಿಗೆ ಸರಿಪಡಿಸಲಾಗಿದೆ. ಮಾರ್ಗಸೂಚಿ ದರ ಪರಿಷ್ಕರಣೆಯಲ್ಲಿ ಯಾರಿಗಾದರೂ ಆಕ್ಷೇಪಣೆಗಳಿದ್ದರೆ, ಅದನ್ನೂ ಸಲ್ಲಿಸಬಹುದು. ಅಧಿಕಾರಿಗಳು ಆಕ್ಷೇಪಣೆಗಳನ್ನು ಗಮನಿಸಿ ಹೊಸ ಮಾರ್ಗಸೂಚಿ ದರವನ್ನು ಜಾರಿಗೊಳಿಸುತ್ತಾರೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ನೋಂದಣಿ ಹೆಚ್ಚಳ

ಕಾವೇರಿ-2 ತಂತ್ರಾಂಶದ ಬಳಕೆಯ ನಂತರ ಆಸ್ತಿ ನೋಂದಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಈ ತಂತ್ರಾಂಶ ಜಾರಿಯಾದಾಗ ಸಣ್ಣಪುಟ್ಟ ನ್ಯೂನತೆಗಳಿದ್ದವು. ಆದರೆ ಬಹುತೇಕ ನ್ಯೂನತೆಗಳನ್ನು ಸರಿಪಡಿಸಲಾಗಿದೆ. ಈಗ ರಾಜ್ಯದಲ್ಲಿ ಪ್ರತಿದಿನ ಅಂದಾಜು 10 ರಿಂದ 13 ಸಾವಿರ ಆಸ್ತಿ ನೋಂದಣಿಗಳಾಗುತ್ತಿವೆ. ಕಳೆದ ವರ್ಷಕ್ಕಿಂತ ಸೆಪ್ಟೆಂಬರ್‌ನಲ್ಲೇ ಈಗಾಗಲೇ 800 ಕೋಟಿ ರೂ.ಗೂ ಅಧಿಕ ಆದಾಯ ಸರ್ಕಾರಕ್ಕೆ ಬಂದಿದೆ. ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಸ್ವತ್ತು ಮಾರ್ಗಸೂಚಿ ದರ ಪರಿಷ್ಕರಣೆಯಿಂದ ಸರ್ಕಾರಕ್ಕೆ 2000 ಕೋಟಿ ರೂ. ಆದಾಯ ಬರಬಹುದು. ಕಳೆದ ವರ್ಷಕ್ಕಿಂತ ಹೆಚ್ಚು ಆದಾಯ ನಿರೀಕ್ಷಿಸಲಾಗಿದೆ.

-ಕೃಷ್ಣ ಬೈರೇಗೌಡ, ಕಂದಾಯ ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net