ಕೃಷ್ಣನ ನಾಡಲ್ಲಿ ಕಾಂಗ್ರೆಸ್-ಬಿಜೆಪಿ ಕದನ; ಕೇಸರಿ ಕೋಟೆ ಉಡುಪಿ ಜಿಲ್ಲೆಯಲ್ಲಿ ಮರಳಿ ಖಾತೆ ತೆರೆಯುವುದೇ ಕೈ?

Udupi Roundup
Published on

| ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಕನಕನಿಗೊಲಿದ ಕೃಷ್ಣನ ನಾಡಲ್ಲಿ ಗೆಲುವಿಗಾಗಿ ಕಾಂಗ್ರೆಸ್- ಬಿಜೆಪಿ ನಡುವೆ ನೇರಾನೇರ ಹಣಾಹಣಿ ಇದೆ. ಕಳೆದ ಚುನಾವಣೆಯಲ್ಲಿ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವಿನ ಪತಾಕೆ ಹಾರಿಸಿರುವ ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯದ್ದಾದರೆ, ಕಾಂಗ್ರೆಸ್​ಗೆ ಮರಳಿ ಗದ್ದುಗೆ ಏರುವ ಮೂಲಕ ಸಾಮರ್ಥ್ಯ ಸಾಬೀತುಪಡಿಸಬೇಕಾದ ಅನಿವಾರ್ಯತೆ. ಜಿಲ್ಲೆಯಲ್ಲಿ ಪಾರಮ್ಯ ಮೆರೆಯುತ್ತಿದ್ದ ಕಾಂಗ್ರೆಸ್ ಪ್ರಮುಖ ನಾಯಕರಿಲ್ಲದೆ ಸೊರಗಿರುವುದು ಬಿಜೆಪಿಗೆ ಪ್ಲಸ್. ಆಸ್ಕರ್ ಫರ್ನಾಂಡಿಸ್ ನಿಧನ, ಮಾಜಿ ಸಿಎಂ ವೀರಪ್ಪ ಮೊಯ್ಲಿ ಸ್ಥಳೀಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿರುವುದು, ಪ್ರಮುಖ ನಾಯಕರು ಪಕ್ಷಾಂತರ ಕಾಂಗ್ರೆಸ್​ಗೆ ದೊಡ್ಡ ಹಿನ್ನಡೆ. ಆದರೆ, ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಅತ್ತ ಮತ್ತೆ ಗೆಲುವಿನ ಭರವಸೆಯಲ್ಲಿರುವ ಬಿಜೆಪಿ ಹಾಲಿ ಐವರು ಶಾಸಕರ ಪೈಕಿ ನಾಲ್ವರನ್ನು ಬದಲಾಯಿಸಿ ಹೊಸಬರನ್ನು ಕಣಕ್ಕಿಳಿಸಿದ್ದಲ್ಲದೆ, ಅಬ್ಬರದ ಪ್ರಚಾರವನ್ನೂ ಮಾಡುತ್ತಿದೆ. ಅಭ್ಯರ್ಥಿ ಬದಲಾವಣೆಯ ಆರಂಭದಲ್ಲಿ ಕಾಣಿಸಿಕೊಂಡಿದ್ದ ಅಸಮಾಧಾನಗಳನ್ನೂ ಉತ್ತಮ ರೀತಿಯಲ್ಲಿ ನಿಭಾಯಿಸಿದೆ.

ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವುದು ಹಾಲಿ ಸಚಿವರೂ ಆಗಿರುವ ಸುನೀಲ್ ಕುಮಾರ್ ಪ್ರತಿನಿಧಿಸುತ್ತಿರುವ ಕಾರ್ಕಳ. ಮುಖ್ಯಮಂತ್ರಿಯನ್ನು ನೀಡಿದ ಈ ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದು, ಇದನ್ನು 2004ರಲ್ಲಿ ಪ್ರಪ್ರಥಮವಾಗಿ ಒಡೆದು ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಸುನೀಲ್ ಕುಮಾರ್. 2008ರಲ್ಲಿ ಮತ್ತೆ ಸೋಲಾದರೂ, ನಂತರ ಸತತ ಎರಡು ಬಾರಿ ಗೆದ್ದು ಅಭಿವೃದ್ಧಿ ಶಕೆಯೊಂದಿಗೆ ಕಾರ್ಯಕರ್ತರ ಒಲವು ಉಳಿಸಿಕೊಂಡಿದ್ದಾರೆ. ಇವರಿಗೆ ಎದುರಾಗಿ ಉದಯಕುಮಾರ್ ಶೆಟ್ಟಿ ಮುನಿಯಾಲು ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಮಾಜಿ ಶಾಸಕ ಗೋಪಾಲ ಭಂಡಾರಿ ನಿಧನದ ಬಳಿಕ ಪಕ್ಷಕ್ಕೆ ಆಕ್ಸಿಜನ್ ಕೊಟ್ಟು ಉಸಿರು ಉಳಿಸಿಕೊಂಡ ಮಂಜುನಾಥ ಪೂಜಾರಿ ಟಿಕೆಟ್ ಕೈತಪ್ಪಿದ್ದರಿಂದ ಮುನಿಸಿಕೊಂಡಿದ್ದು, ವೀರಪ್ಪ ಮೊಯ್ಲಿ ಕೂಡ ಒಮ್ಮೆ ಸುದ್ದಿಗೋಷ್ಠಿ ನಡೆಸಿದ್ದು ಹೊರತುಪಡಿಸಿದರೆ ನಂತರ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ.

ಬಿಜೆಪಿಯ ಮತಬುಟ್ಟಿಗೆ ಈ ಬಾರಿ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಕೈ ಹಾಕಲು ಮುಂದಾಗಿದ್ದಾರೆ. ಅವರು ಸವಾಲಾಗುವ ಲಕ್ಷಣಗಳು ಕಾಣುತ್ತಿಲ್ಲ. ಉಳಿದಂತೆ ಜೆಡಿಎಸ್, ಆಪ್, ಪ್ರಜಾಕೀಯ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರೂ ದಾಖಲೆಗಷ್ಟೇ ಸೀಮಿತ.

ಉಡುಪಿಗೆ ಒಡೆಯ ಯಾರು?

ಉಡುಪಿ ಕ್ಷೇತ್ರದಲ್ಲಿ ಮೂರು ಬಾರಿಯ ಶಾಸಕ ಕೆ.ರಘುಪತಿ ಭಟ್ ಬದಲು ಈ ಬಾರಿ ಮೊಗವೀರ ಸಮುದಾಯದ ಯಶ್​ಪಾಲ್ ಸುವರ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕಾಂಗ್ರೆಸ್​ನಿಂದಲೂ ಅದೇ ಸಮುದಾಯದ ಪ್ರಸಾದ್​ರಾಜ್ ಕಾಂಚನ್ ಕಣದಲ್ಲಿದ್ದಾರೆ. ಮೀನುಗಾರರ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿರುವ ಯಶ್​ಪಾಲ್, ಹಿಜಾಬ್ ವಿವಾದ ಸಂದರ್ಭ ಹಿಂದು ಪರ ನಿಲುವು ತಾಳಿರುವುದು ಗಮನ ಸೆಳೆದಿತ್ತು. ಟಿಕೆಟ್ ಕೈತಪ್ಪಿದಾಗ ಆರಂಭದಲ್ಲಿ ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದರು, ಆದರೆ ಈಗ ಅಭ್ಯರ್ಥಿಯ ಪರವಾಗಿ ಅವಿರತ ಪ್ರಚಾರದಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್​ನ ಪ್ರಸಾದ್ ರಾಜ್ ಉದ್ಯಮಿಯಾಗಿದ್ದು, ರಾಜಕೀಯಕ್ಕೆ ಹೊಸಬರು. ಅವರ ವ್ಯವಹಾರಿಕ ಲೆಕ್ಕಾಚಾರಗಳು ರಾಜಕೀಯದಲ್ಲಿ ಕೈ ಕೊಡುವ ಸಾಧ್ಯತೆ ಜಾಸ್ತಿಯಿವೆ. ಕ್ಷೇತ್ರದಲ್ಲಿ ಇತರರ ಸ್ಪರ್ಧೆ ಹೆಸರಿಗಷ್ಟೇ.

ಕುಂದಾಪುರದಲ್ಲಿ ಹಾಲಾಡಿ ಸ್ಟಾರ್

ಕುಂದಾಪುರದಲ್ಲಿ ಸತತ ಐದು ಬಾರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿ ಚುನಾವಣೆಯಿಂದ ಹಿಂದಕ್ಕೆ ಸರಿದಿದ್ದಾರೆ. ಅವರ ಬದಲು ಎ.ಜಿ.ಕೊಡ್ಗಿ ಪುತ್ರ ಕಿರಣ್​ಕುಮಾರ್ ಕೊಡ್ಗಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಕೊಡ್ಗಿಯನ್ನು ಗೆಲ್ಲಿಸಲೇಬೇಕು ಎಂದು ಹಾಲಾಡಿ ಪಣ ತೊಟ್ಟಿದ್ದಾರೆ. ಕಾಂಗ್ರೆಸ್​ನಿಂದ ಈ ಬಾರಿ ದಿನೇಶ್ ಹೆಗ್ಡೆ ಮೊಳಹಳ್ಳಿ ಟಿಕೆಟ್ ಪಡೆದಿದ್ದಾರೆ. ಕಾಂಗ್ರೆಸ್ ಆರಂಭದಲ್ಲಿ ತೋರಿಸಿದ ಉತ್ಸಾಹ, ಪ್ರಚಾರ, ಛಲ ಈಗ ಕಾಣುತ್ತಿಲ್ಲ. ಕಳೆದ ಚುನಾವಣೆಯಲ್ಲಿ 56 ಸಾವಿರ ಮತಗಳ ಅಂತರದಿಂದ ಗೆದ್ದ ಬಿಜೆಪಿ ಈ ಬಾರಿಯೂ ಅದೇ ಪುನರಾವರ್ತನೆಯಾಗಬಹುದು ಎಂಬ ನಿರೀಕ್ಷೆಯಲ್ಲಿದೆ.

ಬೈಂದೂರಲ್ಲಿ ಬಿಲ್ಲವ -ಬಂಟರ ಕದನ

ಬೈಂದೂರು ಕ್ಷೇತ್ರದಲ್ಲಿ ಸತತ ಏಳು ಬಾರಿ ಸ್ಪರ್ಧಿಸಿ ನಾಲ್ಕು ಬಾರಿ ಆಯ್ಕೆಯಾದ ಗೋಪಾಲ ಪೂಜಾರಿ ಕಾಂಗ್ರೆಸ್​ನಿಂದ ಕಣದಲ್ಲಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಬದಲು ‘ಬರಿಗಾಲ ಸಂತ’ ಎಂದು ಸಂಘ ಪರಿವಾರದಲ್ಲಿ ಕರೆಸಿಕೊಳ್ಳುವ ಗುರುರಾಜ್ ಗಂಟಿಹೊಳೆ ಸ್ಪರ್ಧೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಬಿಲ್ಲವ-ಬಂಟ ಸಮುದಾಯದ ನಡುವಿನ ಚುನಾವಣೆಯೆಂಬಂತೆ ಪ್ರಚಾರ ನಡೆಯುತ್ತಿದೆ. ಗಂಟಿಹೊಳೆ ಸಾಮಾನ್ಯರಲ್ಲಿ ಸಾಮಾನ್ಯ, ಆರೆಸ್ಸೆಸ್ ಕಾರ್ಯಕರ್ತನೆಂಬುದು ಪ್ಲಸ್ ಪಾಯಿಂಟ್. ಗೋಪಾಲ ಪೂಜಾರಿ ಸೋತರೂ ಜನಸಂಪರ್ಕದಿಂದ ದೂರ ಉಳಿದಿಲ್ಲ, ಮೇಲಾಗಿ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿಕೊಂಡಿದ್ದಾರೆ. ಹಿಂದು ಸಮುದಾಯದ ಮತ ಬಾಚಿಕೊಳ್ಳಲು ಕಾಂಗ್ರೆಸ್ ಈ ಬಾರಿ ಕೇಸರಿ ಶಾಲು, ಧ್ವಜದ ಮೊರೆ ಹೋಗಿರುವುದೂ ಕ್ಷೇತ್ರದ ವಿಶೇಷ.

ಕಾಪುವಿನಲ್ಲಿ ಸೊರಕೆ ಗುರ್ಮೆ

ಕಾಪು ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಶಾಸಕ ಲಾಲಾಜಿ ಮೆಂಡನ್ ಬದಲು ಸುರೇಶ್ ಶೆಟ್ಟಿ ಗುರ್ವೆ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ಕಾಂಗ್ರೆಸ್​ನಿಂದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಇದ್ದಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಮೊಗವೀರ ಸಮುದಾಯವನ್ನು ಸೆಳೆಯಲು ಎರಡೂ ಪಕ್ಷಗಳು ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ಸ್ವತಃ ರಾಹುಲ್ ಗಾಂಧಿ ಮೀನುಗಾರರ ಜತೆ ಕ್ಷೇತ್ರದಲ್ಲಿ ಸಂವಾದ ನಡೆಸಿರುವುದು ಇದಕ್ಕೆ ಸಾಕ್ಷಿ. ಸೊರಕೆ ಇದೇ ನನ್ನ ಕೊನೆಯ ಚುನಾವಣೆ ಎಂದು ಘೊಷಿಸಿದ್ದು, ಸಿಂಪಥಿ ಕೆಲಸ ಮಾಡುವ ಜತೆಗೆ ಕಾಂಗ್ರೆಸ್ ಕಡೆಗಿನ ಒಲವು ಕೈಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಹಲವು ವರ್ಷಗಳ ಸಮಾಜಸೇವೆ ಸುರೇಶ್ ಶೆಟ್ಟಿ ಬಗ್ಗೆ ಕ್ಷೇತ್ರದಲ್ಲಿ ಉತ್ತಮ ಅಭಿಪ್ರಾಯ ಮೂಡಿಸಲು ಕಾಋಣವಾಗಿದೆ, ಇದು ಬಿಜೆಪಿಗೆ ಪ್ಲಸ್ ಪಾಯಿಂಟ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net