

Chhattisgarh: ಮದುವೆ ಮನೆಯಲ್ಲಿ ಕಳ್ಳತನ ಮಾಡಿದ್ದಕ್ಕಾಗಿ ತನ್ನ 10ನೇ ಹೆಂಡತಿಯನ್ನೇ ಕೊಲೆ ಮಾಡಿದ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.
ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯ ಸುಲೇಸಾ ಗ್ರಾಮದ 38 ವರ್ಷದ ಧುಲಾರಾಮ್ ಈಗಾಗಲೇ 10 ಬಾರಿ ಮದುವೆಯಾಗಿದ್ದಾರೆ. ಅವನ 9 ಹೆಂಡತಿಯರೂ ಆತನ ನಡವಳಿಕೆಯನ್ನು ಇಷ್ಟಪಡದೆ ಬಿಟ್ಟು ಹೋಗಿದ್ದು, ಬಸಂತಿ ಬಾಯಿಯನ್ನು 10ನೇ ಹೆಂಡತಿಯಾಗಿ ವಿವಾಹವಾಗಿದ್ದನು. ಇಬ್ಬರ ನಡುವೆ ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ, ಇತ್ತೀಚೆಗೆ ಸಂಬಂಧಿಕರೊಬ್ಬರ ಮದುವೆಗೆ ಹೋದಾಗ ಬಸಂತಿ ಬಾಯಿ ಇದೇ ಮದುವೆಯಲ್ಲಿ ಕಳ್ಳತನ ಮಾಡಿದ್ದಳು ಇದರಿಂದ ಕೋಪಗೊಂಡ ಧುಲಾರಾಮ್ ಆಕೆಯನ್ನು ಕೊಲೆಗೈದಿದ್ದಾನೆ.
ಬಸಂತಿ ಬಾಯಿ ಮದುವೆ ಮನೆಯಲ್ಲಿ ಹೊಸ ಬಟ್ಟೆಗಳು ಮತ್ತು ಬೇಳೆಕಾಳು, ಅಕ್ಕಿ ಮತ್ತು ಅಡುಗೆ ಎಣ್ಣೆಯನ್ನು ಕದ್ದುಕೊಂಡು ಹೋಗಿದ್ದಳು. ಆದರೆ ಇದನ್ನೆಲ್ಲಾ ನೋಡಿದ ಕೆಲವರು ಮದುವೆ ಮನೆಯಲ್ಲಿದ್ದ ಎಲ್ಲರಿಗೂ ಹೇಳಿದರು. ಇದನ್ನು ತಿಳಿಯದೆ ಅಲ್ಲೇ ಇದ್ದ ಧುಲಾರಾಮ್ನ್ನು ಜನರು ಪ್ರಶ್ನಿಸುತ್ತಾರೆ. ಇದರಿಂದ ಅವಮಾನಗೊಂಡ ಅವನು ತಕ್ಷಣ ಅಲ್ಲಿಂದ ಹೊರಟು ಹೆಂಡತಿಗಾಗಿ ಹುಡುಕಾಡುತ್ತಾನೆ.
ಈ ಸಮಯದಲ್ಲಿ ಅವಳು ಅಲ್ಲಿಯೇ ಹತ್ತಿರದಲ್ಲಿದ್ದ ಕಾಡಿನಲ್ಲಿ ಮಲಗಿರುವುದನ್ನು ಕಂಡು ಅವನು ತಕ್ಷಣ ಅಲ್ಲಿಗೆ ಹೋಗಿ ಜಗಳವಾಡುತ್ತಾನೆ. ಇಬ್ಬರ ನಡುವೆ ನಡೆದ ಗಂಭೀರವಾದ ವಾಗ್ವಾದದ ನಂತರ ಅವನು ತುಂಬಾ ಕೋಪಗೊಂಡು ಬಸಂತಿ ಬಾಯಿಯ ಮೇಲೆ ಹಲ್ಲೆ ಮಾಡುತ್ತಾನೆ. ನಂತರ ಅವಳನ್ನು ಅಲ್ಲಿಯೇ ಬಿಟ್ಟು, ಒಣ ಎಲೆಗಳು ಮತ್ತು ಕಸದಿಂದ ಮುಚ್ಚಿ ಓಡಿಹೋಗುತ್ತಾನೆ. ಆದರೆ 5 ದಿನಗಳ ನಂತರ ಅಲ್ಲಿಂದ ದುರ್ವಾಸನೆ ಬಂದಿದ್ದರಿಂದ, ಸ್ಥಳೀಯರು ಅಲ್ಲಿಗೆ ಹೋಗಿ ನೋಡುತ್ತಾರೆ. ಶವ ಪತ್ತೆಯಾದ ತಕ್ಷಣ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂಪೂರ್ಣವಾಗಿ ಕೊಳೆತ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಘಟನಾ ಸ್ಥಳದಲ್ಲಿ ಮಹಿಳೆಯ ಫೋನ್ ಪತ್ತೆಯಾಗಿದ್ದು, ಆಕೆಯನ್ನು ಬಸಂತಿ ಬಾಯಿ ಎಂದು ಗುರುತಿಸಲಾಗಿದೆ. ನಂತರ ಆಕೆಯ ಪತಿ ಧುಲಾ ರಾಮ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸಿದಾಗ, ಅವನು ಅಪರಾಧವನ್ನು ಒಪ್ಪಿಕೊಂಡಿದ್ದಾನೆ. (ಏಜೆನ್ಸೀಸ್)