ಅಸ್ಸಾಂಗೆ ಪ್ರವಾಹದ ಬರೆ; ಸಂಕಷ್ಟಕ್ಕೆ ಸಿಲುಕಿದ 11 ಲಕ್ಷ ಜನ, 61 ಜನರ ಸಾವು

page 9 1
Published on

ಗುವಾಹಟಿ: ಕರೊನಾದ ಆಘಾತದಿಂದ ಹೊರಬರುವ ಮೊದಲೇ ಅಸ್ಸಾಂ ಭೀಕರ ಪ್ರವಾಹಕ್ಕೆ ತತ್ತರಿಸಿದ್ದು, 18 ಜಿಲ್ಲೆಗಳ 11 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಿನ್ಸುಕಿಯಾ ಹಾಗೂ ಮೊರಿಗಾಂವ್​ನಲ್ಲಿ ತಲಾ ಒಬ್ಬರು ಮೃತಪಡುವ ಮೂಲಕ ನೆರೆಗೆ ಬಲಿಯಾದವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಪ್ರವಾಹದಿಂದಾಗಿ 37 ಜನರು ಜೀವ ಕಳೆದುಕೊಂಡರೆ 24 ಜನರು ಭೂಕುಸಿತದಿಂದಾಗಿ ಪ್ರಾಣಬಿಟ್ಟಿದ್ದಾರೆಂದು ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ನೆರೆ ಪೀಡಿತ 18 ಜಿಲ್ಲೆಗಳ ಪೈಕಿ ಏಳು ಜಿಲ್ಲೆಗಳಲ್ಲಿ ಭಾರಿ ಹಾನಿಯಾಗಿದ್ದು, ಅಪಾರ ಪ್ರಮಾಣದ ಆಸ್ತಿ ಕೊಚ್ಚಿಕೊಂಡು ಹೋಗಿದೆ.

ಮೋದಿ ಅಭಯ: ಸೂರು ಕಳೆದುಕೊಂಡ 6513 ಜನರಿಗೆ 171 ಪರಿಹಾರ ಕೇಂದ್ರ ತೆರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಸ್ಸಾಂ ಸಿಎಂ ಸರ್ಬಾನಂದ ಸೋನೋವಾಲ್ ಜತೆ ಮಾತನಾಡಿ ಕೇಂದ್ರದಿಂದ ಅಗತ್ಯವಾದ ಎಲ್ಲ ನೆರವು ನೀಡುವುದಾಗಿ ಧೈರ್ಯ ತುಂಬಿದ್ದಾರೆ.

ದ್ವೀಪವಾದ ಹಳ್ಳಿಗಳು: ನೂರಾರು ಗ್ರಾಮಗಳು ಭಾರಿ ನೆರೆಯಿಂದಾಗಿ ದ್ವೀಪಗಳಂತಾಗಿವೆ. ಬಹುತೇಕ ಕಡೆ ವಿದ್ಯುತ್ , ದೂರವಾಣಿ ಸಂಪರ್ಕ ಸ್ಥಗಿತಗೊಂಡಿದೆ. ಹಲವು ಜಿಲ್ಲೆಗಳಲ್ಲಿ ರಸ್ತೆ, ಸೇತುವೆ, ಹಳ್ಳ, ಕೊಳ್ಳಗಳು ಕೊಚ್ಚಿ ಹೋಗಿದ್ದು, ಸಾವಿರಾರು ಮರಗಳು ಧರೆಗುರುಳಿವೆ. ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ಧುಬ್ರಿ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ.

1,046 ಜನರ ರಕ್ಷಣೆ: ಬಾರ್ಪೆಟಾದಲ್ಲಿ ಹೆಚ್ಚು ಹಾನಿ ಸಂಭವಿಸಿದ್ದು, ಒಟ್ಟಾರೆ 6.33 ಲಕ್ಷ ಜನರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ದಕ್ಷಿಣ ಸಲ್ಮಾರಾದಲ್ಲಿ 1.95 ಲಕ್ಷ ಜನರು ತತ್ತರಿಸಿದ್ದಾರೆ. ಎಸ್ ಡಿಆರ್​ಎಫ್ ಪಡೆಈ ಜಿಲ್ಲೆಗಳ 1,046 ಜನರನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದೆ. ತೀವ್ರ ಸಂಕಷ್ಟಕ್ಕೆ ಸಿಲುಕಿರುವ 8 ಜಿಲ್ಲೆಗಳಲ್ಲಿ 171 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಸದ್ಯ 6531 ಜನರು ಈ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಕಾಜಿರಂಗದಲ್ಲಿ ವನ್ಯಜೀವಿ ತತ್ತರ: ವಿಶ್ವವಿಖ್ಯಾತ ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೂ ನೆರೆವ್ಯಾಪಿಸಿದೆ. ಒಟ್ಟಾರೆ 223 ಕ್ಯಾಂಪ್​ಗಳ ಪೈಕಿ 32 ಕ್ಯಾಂಪ್ ಹಾಗೂ ರಾಜೀವ್ ಗಾಂಧಿ ಒರಾಂಗ್ ರಾಷ್ಟ್ರೀಯ ಉದ್ಯಾನದ 40ರಲ್ಲಿ 2 ಕ್ಯಾಂಪ್​ಗಳು ಪ್ರವಾಹದಿಂದ ತತ್ತರಿಸಿವೆ. ವನ್ಯಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುಸತ್ತಿದ್ದಾರೆ.

ಮುಂಬೈನಲ್ಲಿ ದಾಖಲೆ ವರ್ಷಧಾರೆ: ಮಹಾರಾಷ್ಟ್ರದಾದ್ಯಂತ ಮುಂಗಾರು ಚುರುಕುಗೊಂಡಿರುವ ಬೆನ್ನಲ್ಲೇ ರಾಜಧಾನಿ ಮುಂಬೈನಲ್ಲೇ ಕಳೆದ 48 ಗಂಟೆ ಅವಧಿಯಲ್ಲಿ 298 ಮಿ.ಮೀಟರ್ ದಾಖಲೆಯ ಮಳೆಯಾಗಿದೆ. ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿರುವ ವರ್ಷಧಾರೆ ಇನ್ನೂ ಮೂರು ದಿನ ಅಬ್ಬರಿಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಅತಿ ಹೆಚ್ಚು ಕರೊನಾ ಪ್ರಕರಣಗಳಿಂದ ವಿಶ್ವಮಟ್ಟದಲ್ಲಿ ಗುರುಸಿಕೊಂಡಿರುವ ಮುಂಬೈನಲ್ಲಿ ಈಗಾಗಲೇ ಜನಜೀವನ ಸಂಪೂರ್ಣ ತತ್ತರಿಸಿದೆ. ಇದೀಗ ಎಡೆಬಿಡದೆ ಸುರಿಯುತ್ತ ರುವ ಮಳೆಬದುಕಿನ ಮೇಲೆ ಮತ್ತಷ್ಟು ಬರೆ ಎಳೆದಿದೆ. ಜೂನ್​ನಿಂದ ಈವರೆಗೆ ಮುಂಬೈ 915 ಮಿ.ಮೀ ಮಳೆ ಕಂಡಿದ್ದರೆ, ಉಪನಗರಗಳಲ್ಲಿ 780 ಮಿ.ಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net