"ಧುರಂಧರ್' ಸರಣಿಯ ಅದ್ಭುತ ಯಶಸ್ಸಿನ ಬಳಿಕ ಆದಿತ್ಯ ಧರ್, ಬಾಲಿವುಡ್ನ ಬಹುಬೇಡಿಕೆಯ ನಿರ್ದೇಶಕ ಎನಿಸಿಕೊಂಡಿದ್ದಾರೆ. ಹಲವು ಹೊಸ ಪ್ರಾಜೆಕ್ಟ್ಗಳನ್ನು ನಿರ್ದೇಶಿಸಲು ಅವಕಾಶ ಬರುತ್ತಿದ್ದರೂ, ಆದಿತ್ಯ ಅತ್ಯಂತ ಎಚ್ಚರಿಕೆಯಿಂದ ಹೊಸ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿಯೇ "ಧುರಂಧರ್ 2' ತೆರೆಗೆ ಬಂದು ಒಂದು ವರ್ಷದ ಬಳಿಕ ಅರ್ಥಾತ್ 2027ರ ಮಾರ್ಚ್ನಲ್ಲಿ ಅವರ ಹೊಸ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ. ಅದರ ನಡುವೆಯೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮಾ, ಮಹಾರಾಜ ಲಚಿತ್ ಬೊುರ್ಕನ್ ಸಿನಿಮಾ ಮಾಡಲು ಆದಿತ್ಯ ಧರ್ಗೆ ಆಫರ್ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಖುದ್ದು ಅವರೇ ಈ ಬಗ್ಗೆ ಬಹಿರಂಗಪಡಿಸಿದ್ದು, "ನಮ್ಮ ಸರ್ಕಾರದ ವತಿಯಿಂದಲೇ ಲಚಿತ್ ಬೊುರ್ಕನ್ ಅವರ ಸಾಹಸಗಾಥೆಯ ಕುರಿತು ಸಿನಿಮಾ ಮಾಡುವ ಕುರಿತು ಚರ್ಚಿಸುತ್ತಿದ್ದೇವೆ. ಅವರಂತಹ ವೀರಸೇನಾನಿಯ ಕಥೆಯನ್ನು ವಿಶ್ವದ ಮುಂದಿಡುವುದು ಕೂಡ ಸಾಧನೆಯೇ ಸರಿ. ಹಾಗೇನಾದರೂ ಆದಿತ್ಯ ಧರ್ ಅವರು ಈ ಸಿನಿಮಾ ಮಾಡಲು ಸಾಧ್ಯವಾಗದಿದ್ದರೆ, ಬೇರೆ ನಿರ್ದೇಶಕರನ್ನು ಸಂಪರ್ಕಿಸಲಿದ್ದೇವೆ. ಲಚಿತ್ ಬೊುರ್ಕನ್ ಅವರ ಜೀವನದ ಕುರಿತು ಒಂದೊಳ್ಳೆ ಸಿನಿಮಾ ಮಾಡುವುದಷ್ಟೇ ನಮ್ಮ ಉದ್ದೇಶ' ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಈಗಾಗಲೇ ಆದಿತ್ಯ ಧರ್ ಜತೆ ಹಿಮಂತಾ ಒಂದು ಸುತ್ತಿನ ಮಾತುಕತೆ ಮುಗಿಸಿದ್ದು, ಆಗಸ್ಟ್ನಲ್ಲಿ ನಿರ್ದೇಶಕನನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.