ಪಾಲಕರಿಗೆ ದೂರು ನೀಡಿದ ಗರ್ಭಿಣಿ ಶಿಕ್ಷಕಿಯ ಜೊತೆ ಅಸಭ್ಯವಾಗಿ ವರ್ತಿಸಿದ ಹೈಸ್ಕೂಲ್​ ವಿದ್ಯಾರ್ಥಿಗಳು

Student
Published on

ದೀಸ್ಪುರ್​: ಗರ್ಭಿಣಿ ಶಿಕ್ಷಕಿಯ ಮೇಲೆ ಹಲ್ಲೆ ಮಾಡಿರುವ ಆರೋಪದ ಮೇಲೆ 22 ಶಾಲಾ ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳು ಶಾಲೆಯಲ್ಲಿ ನಡೆಸಿದ ಪರೀಕ್ಷೆಯಲ್ಲೂ ಸರಿಯಾದ ನಿರ್ವಹಣೆ ತೋರಿರಲಿಲ್ಲ. ಹೀಗಾಗಿ ಶಿಕ್ಷಕಿ ಪಾಲಕರಿಗೆ ತಿಳಿಸಿದ್ದರು. ಈ ವಿಚಾರ ಗೊತ್ತಾದ ಬಳಿಕ ಐದು ತಿಂಗಳ ಗರ್ಭಿಣಿ ಅಂತಾನೂ ನೋಡದೆ ಶಿಕ್ಷಕಿಯ ಮೇಲೆ 10 ಮತ್ತು 11ನೇ ತರಗತಿ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿರುವ ನವೋದಯಾ ವಿದ್ಯಾಲಯದ ಪ್ರಿನ್ಸಿಪಾಲ್​ ರತೀಶ್​ ಕುಮಾರ್​, ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಆರೋಗ್ಯ ಸ್ಥಿತಿ ಸಹಜವಾಗಿದೆ. ಆ ದಿನ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಗುಂಪಿನಿಂದ ಅರಾಜಕತೆ ನಡೆದಿದ್ದು, ವಿದ್ಯಾರ್ಥಿಗಳು ನನ್ನ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಅವರನ್ನು ಸ್ಥಳಕ್ಕೆ ಕರೆಸಲಾಯಿತು. ಘಟನೆಯಲ್ಲಿ ಭಾಗಿಯಾಗಿರುವ 22 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಮತ್ತು ಶಾಲೆಯಿಂದ ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಈ ಘಟನೆ ಕಳೆದ ಭಾನುವಾರ ಸಂಜೆ ನಡೆದಿದೆ. ಇತಿಹಾಸ ಬೋಧಿಸುವ ಶಿಕ್ಷಕಿ ವಿದ್ಯಾರ್ಥಿಗಳ ಕಳಪೆ ಶೈಕ್ಷಣಿಕ ಕಾರ್ಯಕ್ಷಮತೆಯ ಬಗ್ಗೆ ಪೋಷಕರ ಶಿಕ್ಷಕರ ಮಂಡಳಿ (ಪಿಟಿಸಿ) ಸಭೆಯಲ್ಲಿ ಹೇಳಿದ್ದರು. ಸಭೆ ನಡೆದ ಬಳಿಕ ಕೆಲವು ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ಬಂದು ಮುಖ್ಯ ಶಾಲಾ ಆವರಣದಲ್ಲೇ ಶಿಕ್ಷಕಿಗೆ ಕಿರುಕುಳ ನೀಡಲು ಆರಂಭಿಸಿದರು. ಓರ್ವ ವಿದ್ಯಾರ್ಥಿ ಶಿಕ್ಷಕಿಯನ್ನು ಹಿಡಿದು ತಳ್ಳಿದರೆ, ಮತ್ತೊಬ್ಬ ಆಕೆಯ ಕೂದಲು ಹಿಡಿದು ಎಳೆದಾಡಿದನು ಎಂದು ರತೀಶ್​ ಕುಮಾರ್​ ತಿಳಿಸಿದರು.

ಇತರೆ ಮಹಿಳಾ ಶಿಕ್ಷಕಿಯರು, ಸಿಬ್ಬಂದಿ ವರ್ಗ ಹಾಗೂ ಕೆಲವು ವಿದ್ಯಾರ್ಥಿನಿಯರ ನೆರವಿನಿಂದ ವಿದ್ಯಾರ್ಥಿಗಳ ಕೈಯಿಂದ ಶಿಕ್ಷಕಿಯನ್ನು ರಕ್ಷಿಸಲಾಯಿತು. ತಕ್ಷಣ ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮೊದಲೇ ಗರ್ಭಿಣಿ ಆಗಿರುವುದರಿಂದ ಕೆಲವು ಸಮಸ್ಯೆಗಳನ್ನು ಶಿಕ್ಷಕಿ ಎದುರಿಸುತ್ತಿದ್ದರು. ಸದ್ಯ ಅವರ ಆರೋಗ್ಯ ಸ್ಥಿತಿ ಸಹಜವಾಗಿದೆ ಎಂದು ರತೀಶ್​ ಹೇಳಿದರು.

ಈ ಘಟನೆಯಲ್ಲಿ 10 ಮತ್ತು 11 ನೇ ತರಗತಿಯ 22 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆಂದು ನಮ್ಮ ವಿಚಾರಣೆಯಿಂದ ನಾವು ಕಂಡುಕೊಂಡಿದ್ದೇವೆ ಮತ್ತು ಮರುದಿನ ಬೆಳಿಗ್ಗೆ ನನ್ನ ನಿವಾಸದಲ್ಲಿ ತುರ್ತು ಸಭೆ ನಡೆಸಿದ ನಂತರ ನಾನು ಅವರ ಪೋಷಕರಿಗೆ ಕರೆ ಮಾಡಿದೆ. ಈ ವೇಳೆಯೂ ವಿದ್ಯಾರ್ಥಿಗಳು ನನಗೆ ಫೋನ್ ಮೂಲಕ ಬೆದರಿಕೆ ಹಾಕಿದರು. ಮತ್ತು ನನ್ನ ಮೇಲೆ ದಾಳಿ ಮಾಡಲು ನನ್ನ ಕ್ವಾರ್ಟರ್ಸ್ ಕಡೆಗೆ ತೆರಳಲು ಪ್ರಾರಂಭಿಸಿದರು ಎಂದು ರತೀಶ್​ ತಿಳಿಸಿದರು.

ಔಪಚಾರಿಕ ದೂರು ದಾಖಲಾಗದ ಕಾರಣ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ದಿಬ್ರುಗಢ ಡೆಪ್ಯುಟಿ ಕಮಿಷನರ್ ಅವರ ಕಚೇರಿಗೆ ಮಾಹಿತಿ ತಿಳಿಸಿದ್ದು, ಸಂಬಂಧಿಸಿದ ಎಡಿಸಿ ಮ್ಯಾಜಿಸ್ಟ್ರೇಟ್ ತನಿಖೆಯ ಭರವಸೆಯನ್ನು ನೀಡಿದ್ದಾರೆ ಮತ್ತು ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ರತೀಶ್​ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net