

ಬೆಂಗಳೂರು: ಇತ್ತೀಚೆಗೆ ತೆರೆಕಂಡಿದ್ದ ಪರಮ್ ನಿರ್ದೇಶನದ ಚೊಚ್ಚಲ ಸಿನಿಮಾ ‘ಕೋಟಿ’ಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿತ್ತು. ಚಿತ್ರದಲ್ಲಿ ಡಾಲಿ ಧನಂಜಯ್‌ಗೆ ಜೋಡಿಯಾಗಿ ಮೋಕ್ಷಾ ಕುಶಾಲ್ ‘ನವಮಿ’ ಪಾತ್ರದಲ್ಲಿ ಮಿಂಚಿದ್ದರು. ನಟಿಯ ಸಹಜ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಹಾಗಾದರೆ ‘ಕೋಟಿ’ ಬಳಿಕ ಮೋಕ್ಷಾ ಮುಂದೇನು ಮಾಡುತ್ತಿದ್ದಾರೆ? ಹೊಸ ಕಥೆ ಒಪ್ಪಿಕೊಂಡಿದ್ದಾರಾ? ಅವರ ಹವ್ಯಾಸಗಳೇನು? ಡಯಟ್ ಹೇಗಿರುತ್ತದೆ? ಎಂಬುದರ ಬಗ್ಗೆ ಮೋಕ್ಷಾ ಕುಶಾಲ್ ವಿಜಯವಾಣಿ ಜತೆ ಮುಕ್ತವಾಗಿ ಮಾತನಾಡಿದ್ದಾರೆ.
ಏಳು ವರ್ಷಗಳಲ್ಲಿ ಮೂರು ಸಿನಿಮಾ
ಮೋಕ್ಷಾ ತಾವು ನಟಿಸುವ ಚಿತ್ರ ಮತ್ತು ಪಾತ್ರದ ಬಗ್ಗೆ ತುಂಬಾ ಚೂಸಿಯಂತೆ. ‘ನಾನು ಈ ಹಿಂದೆ ‘ಆಯನ’ (2017) ಹಾಗೂ ‘ನವರತ್ನ’ (2020) ಸಿನಿಮಾಗಳಲ್ಲಿ ನಟಿಸಿದ್ದೆ. ಬಳಿಕ ಐದು ವರ್ಷಗಳಲ್ಲಿ ಹಲವು ಕಥೆಗಳನ್ನು ಕೇಳಿದ್ದೆ. ಆದರೆ, ಪಾತ್ರ ಆಯ್ಕೆಯಲ್ಲಿ ನಾನು ತುಂಬಾ ಚ್ಯೂಸಿ. ಇದೇ ಸಮಯದಲ್ಲಿ ನನಗೆ ‘ಕೋಟಿ’ ಆರ್ ಬಂತು. ಧನಂಜಯ್‌ರಂತ ಪ್ರತಿಭಾವಂತ ನಟರೊಂದಿಗೆ ಅಭಿನಯಿಸಲು ಅವಕಾಶ ದೊರೆಯಿತು. ‘ನವಮಿ’ ಪಾತ್ರದ ಮೂಲಕ ಒಂದೊಳ್ಳೆ ವೇದಿಕೆ ನಿರ್ಮಾಣವಾಯಿತು. ಚಿತ್ರದಲ್ಲಿ ಗ್ಲಾಮರ್‌ಗಷ್ಟೇ ಬಳಸದೆ ಪಾತ್ರಕ್ಕೂ ಪ್ರಾಮುಖ್ಯವಿತ್ತು. ಕ್ಲೈಮ್ಯಾಕ್ಸ್‌ನಲ್ಲಿ ಹುಲಿ ವೇಷ ಹಾಗೂ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು ಹೈಲೈಟ್. ಇದು ನನ್ನ ವೈಯಕ್ತಿಕ ಬೆಳವಣಿಗೆಗೆ ಕಾರಣವಾಯಿತು’ ಎಂದು ಮೋಕ್ಷಾ ಖುಷಿ ಹಂಚಿಕೊಳ್ಳುತ್ತಾರೆ.
ಸದ್ಯ ‘ಮೋಡ ಕವಿದ ವಾತಾವರಣ’:
‘ಕೋಟಿ’ ಸಿನಿಮಾದ ಮುಂಚೆಯೇ ಮೋಕ್ಷಾ, ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರದಲ್ಲಿ ನಟಿಸಿದ್ದರು. ಆದರೆ, ಕಾರಣಾಂತರಗಳಿಂದ ಶೂಟಿಂಗ್ ವಿಳಂಬವಾಗಿದೆ. ಇನ್ನು ಎರಡು ದೃಶ್ಯ ಹಾಗೂ ಒಂದು ಸಾಂಗ್ ಬಾಕಿಯಿದ್ದು, ಸದ್ಯದಲ್ಲಿ ಶೂಟಿಂಗ್ ಆರಂಭವಾಗಲಿದೆ. ಸಾಂಗ್‌ಗಾಗಿ ಪ್ರಾಕ್ಟಿಸ್ ಮಾಡುತ್ತಿರುವ ಅವರು, ‘ಮಹಿಳಾ ಪ್ರಧಾನ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಿದು. ನನ್ನ ಪಾತ್ರದ ಹೆಸರು ಸೌಪರ್ಣಿಕಾ. ಇನ್ನೂ ಹಲವು ಕಥೆಗಳನ್ನು ಕೇಳಿದ್ದೇನೆ. ಆದರೆ ಒಪ್ಪಿಕೊಂಡಿಲ್ಲ. ನನಗೆ ಐತಿಹಾಸಿಕ ಪಾತ್ರಗಳಲ್ಲಿ ಹಾಗೂ ರಗಡ್ ಲುಕ್‌ನಲ್ಲಿ ನಟಿಸುವ ಆಸೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ. ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಮೋಕ್ಷಾ ಪ್ರತಿದಿನ ಯೋಗಾಭ್ಯಾಸ, ಜಿಮ್ ಮಾಡುತ್ತಾರಂತೆ. ಊಟ ಹಾಗೂ ಜೀವನಶೈಲಿಯಲ್ಲಿ ಶಿಸ್ತು ರೂಢಿಸಿಕೊಂಡಿದ್ದಾರೆ.
ಹೊಸತು ತಿಳಿಯುವ ಕೌತುಕ
ಸಿನಿಮಾ ಜತೆಗೆ ಮಾಡೆಲಿಂಗ್, ಜಾಹೀರಾತುಗಳಲ್ಲಿ ಸಕ್ರಿಯರಾಗಿರುವ ಮೋಕ್ಷಾ, ‘ನನ್ನ ವೃತ್ತಿ ಜೀವನ ಆರಂಭವಾಗಿದ್ದೆ ಮಾಡಲಿಂಗ್‌ನಿಂದ. ವಸ ವಿನ್ಯಾಸಕ ಪ್ರಸಾದ್ ಬಿದ್ದಪ ಜತೆ ಎರಡು ವರ್ಷ ಕೆಲಸ ಮಾಡಿದ್ದೇನೆ. ಈಗಲೂ ಮಾಡೆಲಿಂಗ್, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನನಗೆ ಹೊಸ ವಿಷಯಗಳ ಬಗ್ಗೆ ತಿಳಿಯುವ ಆಸಕ್ತಿ ಹೆಚ್ಚು. ಆಗಾಗ ಹೊಸ ಹೊಸ ಜಾಗಗಳಿಗೆ ಪ್ರವಾಸ ಹೋಗುತ್ತಿರುತ್ತೇನೆ. ಆ ಸ್ಥಳದ ಭಾಷೆ, ಸಂಸ್ಕೃತಿ, ಜೀವನ ಪದ್ಧತಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ’ ಎನ್ನುತ್ತಾರೆ.